ನವದೆಹಲಿ: ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ನಡುವೆ ಸಂಪರ್ಕ ಬೆಸೆಯುವ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಇಂದು ಹಸಿರು ನಿಶಾನೆ ತೋರಿದರು. ಇದು ಉತ್ತರಾಖಂಡ್ನ ಮೊದಲ ವಂದೇ ಭಾರತ್ ರೈಲು ಆಗಿದ್ದು, ವರ್ಚುವಲ್ ಮೂಲಕ ಮೋದಿ ಚಾಲನೆ ನೀಡಿದರು.
ಇಂದು ಡೆಹ್ರಾಡೂನ್ ಮತ್ತು ದೆಹಲಿ ನಡುವೆ ಉತ್ತರಾಖಂಡ್ ತನ್ನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೌಲಭ್ಯ ಪಡೆಯುತ್ತಿದೆ. ಈ ಎಕ್ಸ್‌ಪ್ರೆಸ್ ರೈಲು ಜನರ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಅಲ್ಲದೇ, ರೈಲು ದೇಶದ ರಾಜಧಾನಿಯನ್ನು ದೇವ ಭೂಮಿ ಉತ್ತರಾಖಂಡ್ಅನ್ನು ವೇಗದಲ್ಲಿ ಸಂಪರ್ಕಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಮ್ಮ ರಾಷ್ಟ್ರವನ್ನು ನೋಡಲು ಮತ್ತು ರಾಷ್ಟ್ರದ ಸಾರವನ್ನು ಅರ್ಥಮಾಡಿಕೊಳ್ಳಲು ವಿಶ್ವದಾದ್ಯಂತ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಬಯುತ್ತಿದ್ದಾರೆ. ಇಂತಹ ಸಮಯದಲ್ಲಿ ಉತ್ತರಾಖಂಡದಂತಹ ರಾಜ್ಯಗಳಿಗೆ ಅತ್ಯುತ್ತಮ ಅವಕಾಶಗಳಿವೆ. ವಂದೇ ಭಾರತ್ ರೈಲು ಕೂಡ ಈ ಅವಕಾಶದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಉತ್ತರಾಖಂಡಕ್ಕೆ ಸಹಾಯ ಮಾಡಲಿದೆ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು.
ಅಲ್ಲದೇ, 12 ಸಾವಿರ ಕೋಟಿ ವೆಚ್ಚದ ಚಾರ್ಧಾಮ್ ಮಹಾ ಯೋಜನೆಯ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಇವತ್ತು ಇಡೀ ಪ್ರಪಂಚ ಭಾರತದತ್ತ ತುಂಬಾ ಭರವಸೆಯಿಂದ ನೋಡುತ್ತಿದೆ. ಸವಾಲುಗಳ ನಡುವೆಯೂ ಭಾರತ ತನ್ನ ಆರ್ಥಿಕತೆಯನ್ನು ಬಲಪಡಿಸಿದ ರೀತಿಯನ್ನು ಜಗತ್ತು ಮೆಚ್ಚುತ್ತದೆ ಎಂದು ಮೋದಿ ತಿಳಿಸಿದರು.
ಇದೇ ವೇಳೆ ಉತ್ತರಾಖಂಡ್ ರಾಜ್ಯದಲ್ಲಿ ರೈಲು ಹಳಿಗಳ ಶೇ.100ರಷ್ಟು ವಿದ್ಯುದ್ದೀಕರಣ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ, 2014ರಿಂದ ನಾವು ಭಾರತೀಯ ರೈಲ್ವೆಯನ್ನು ಪರಿವರ್ತಿಸಿದ್ದೇವೆ. ಹೈಸ್ಪೀಡ್ ರೈಲುಗಳ ಕನಸನ್ನು ನನಸಾಗಿಸಲು ಪ್ರಾರಂಭಿಸಿದ್ದೇವೆ. 2014ಕ್ಕಿಂತ ಮೊದಲು ಪ್ರತಿ ವರ್ಷ 600 ಕಿಲೋ ಮೀಟರ್ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಳ್ಳುತ್ತಿತ್ತು. ಇದಕ್ಕೆ ಹೋಲಿಸಿದರೆ ಈಗ ಪ್ರತಿ ವರ್ಷ 6000 ಕಿ.ಮೀ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಳ್ಳುತ್ತವೆ ಎಂದು ಹೇಳಿದ್ರು.
ಡೆಹ್ರಾಡೂನ್ - ದೆಹಲಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಸ್ತುತ 8 ಬೋಗಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ 570 ಪ್ರಯಾಣಿಕರು ಪ್ರಯಾಣಿಸಬಹುದು. ಬುಕ್ಕಿಂಗ್ ಹೆಚ್ಚಾದರೆ ರೈಲು ಬೋಗಿಗಳನ್ನೂ ಹೆಚ್ಚಿಸಲಾಗುತ್ತದೆ. ಈ ರೈಲು ದೆಹಲಿಯಿಂದ ಡೆಹ್ರಾಡೂನ್‌ಗೆ ಪ್ರಯಾಣಿಸುವಾಗ ಪ್ರತಿ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ರೈಲು ಚಲಿಸುತ್ತದೆ. ಆದರೆ, ಇದರ ಸರಾಸರಿ ವೇಗವನ್ನು ಗಂಟೆಗೆ 63.41 ಕಿ. ಮೀ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ದೆಹಲಿಯಿಂದ ಡೆಹ್ರಾಡೂನ್ ಮತ್ತು ಡೆಹ್ರಾಡೂನ್‌ನಿಂದ ದೆಹಲಿ ಶತಾಬ್ದಿ ಎಕ್ಸ್‌ಪ್ರೆಸ್ ಸುಮಾರು 5 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ. ಆದರೆ, ಈ ರೈಲು ದೆಹಲಿಯನ್ನು 4 ಗಂಟೆ 40 ನಿಮಿಷಗಳಲ್ಲಿ ತಲುಪಲಿದೆ. ಡೆಹ್ರಾಡೂನ್‌ನಿಂದ ದೆಹಲಿಗೆ ಬೆಳಗ್ಗೆ 7 ಗಂಟೆಗೆ ಹೊರಡಲಿದೆ. ಈ ರೈಲು ಡೆಹ್ರಾಡೂನ್ - ಹರಿದ್ವಾರ - ರೂರ್ಕಿ - ಸಹಾರನ್‌ಪುರ್ - ಮುಜಾಫರ್‌ನಗರ - ಮೀರತ್ ನಂತರ ದೆಹಲಿಯ ಆನಂದ್ ವಿಹಾರ್ ನಿಲ್ದಾಣವನ್ನು 11:45ಕ್ಕೆ ತಲುಪಲಿದೆ.
ಇದನ್ನೂ ಓದಿ: 'ದೇಶದ ಒಳಿತಿಗೋಸ್ಕರ ಸಮಯ ಬಳಸಿದ್ದೇನೆ': 3 ದೇಶಗಳ ಪ್ರವಾಸದಿಂದ ಮರಳಿದ ಪ್ರಧಾನಿ ಮೋದಿ