ವಾರಣಾಸಿ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಭೆ ನಡೆಸಲಿದ್ದು, ಬಿಹಾರ ಮತ್ತು ನಾಗಾಲ್ಯಾಂಡ್‌ನ ಉಪಮುಖ್ಯಮಂತ್ರಿಗಳೂ ಸಹ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಸ್ಸೋಂ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಯಲಿದೆ.
ಪ್ರಧಾನಮಂತ್ರಿ ಕಚೇರಿ ಪ್ರಕಾರ, ಪ್ರಧಾನಿ ಮೋದಿಯವರು ತಮ್ಮ ವಾರಣಾಸಿ ಭೇಟಿಯ ಎರಡನೇ ದಿನವಾದ ಇಂದು ಮಧ್ಯಾಹ್ನ 3.30ರ ಸುಮಾರಿಗೆ ಸ್ವರ್ವೇದ್ ಮಹಾಮಂದಿರದಲ್ಲಿ ಸದ್ಗುರು ಸದಾಫಲದೇವ್ ವಿಹಂಗಮ್ ಯೋಗ ಸಂಸ್ಥಾನದ 98ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈಗ ಸಿಎಂಗಳೊಂದಿಗೆ ನಡೆಯಲಿರುವ ಸಮಾವೇಶವು ಆಡಳಿತಕ್ಕೆ ಸಂಬಂಧಿಸಿದ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಈ ಸಭೆ 'ಟೀಮ್ ಇಂಡಿಯಾ' ಸ್ಫೂರ್ತಿಯನ್ನು ಹೆಚ್ಚಿಸುವ ಸಲುವಾಗಿರುವ ಈ ಸಭೆ, ಪ್ರಧಾನಿ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿರಲಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ.
ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಇಂದು ಪ್ರಧಾನಿ ಮೋದಿಯವರ ಮುಂದೆ ರಾಜ್ಯದ ಆಡಳಿತದ ಕುರಿತು ಮಾತನಾಡಲಿದ್ದಾರೆ. ನಂತರದ ದಿನಗಳಲ್ಲಿ ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳು ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ.
ಪ್ರಸ್ತುತ ಪ್ರಧಾನಿ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಎರಡು ದಿನಗಳ ಪ್ರವಾಸದಲ್ಲಿದ್ದು, ಮೊದಲ ದಿನ ಸುಮಾರು 339 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಶಿ ವಿಶ್ವನಾಥ ಧಾಮದ 1ನೇ ಹಂತವನ್ನು ಉದ್ಘಾಟಿಸಿದ್ದಾರೆ.
ಇದನ್ನೂ ಓದಿ: Modi in Varanasi: ಬನಾರಸ್ ರೈಲು ನಿಲ್ದಾಣಕ್ಕೆ ತಡರಾತ್ರಿ ಭೇಟಿ, ಪರಿಶೀಲನೆ ನಡೆಸಿದ ನಮೋ