ಕೊಚ್ಚಿ(ಕೇರಳ): ನೌಕಾಪಡೆಗೆ ಸ್ವದೇಶಿ 'ಐಎನ್ಎಸ್ ವಿಕ್ರಾಂತ್' ಸೇರ್ಪಡೆಯ ಮೂಲಕ ಭಾರತ ಹೊಸದೊಂದು ಇತಿಹಾಸ ಬರೆಯಿತು. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಐಎನ್ಎಸ್ ವಿಕ್ರಾಂತ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, "ಇಂದು ಭಾರತ ಮಹತ್ವದ ಮೈಲಿಗಲ್ಲು ನಿರ್ಮಿಸಿದೆ. ಕೇರಳದಲ್ಲಿ ಪವಿತ್ರ ಓಣಂ ಹಬ್ಬದ ದಿನ ಈ ಸಾಧನೆ ಸಾಧ್ಯವಾಗಿದೆ. ಸ್ವಾವಲಂಬನೆಯ ಆಶಯವನ್ನು ವಿಕ್ರಾಂತ್ ಯುದ್ಧನೌಕೆ ಈಡೇರಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗುಲಾಮಗಿರಿಯ ಸಂಕೇತದಿಂದ ಕೊನೆಗೂ ಮುಕ್ತಿ: ನೌಕಾಪಡೆಯ ಹೊಸಧ್ವಜ ಅನಾವರಣ ಮಾಡಿದ ಮೋದಿ
"ಐಎನ್ಎಸ್ ವಿಕ್ರಾಂತ್ ಕೇವಲ ಹಡಗಷ್ಟೇ ಅಲ್ಲ, ಅದೊಂದು ತೇಲುವ ವಾಯುನೆಲೆಯೂ ಹೌದು. ಇದರಲ್ಲಿ ಉತ್ಪತ್ತಿಗುವ ವಿದ್ಯುತ್ನಿಂದ 5,000 ಮನೆಗಳಿಗೆ ಬೆಳಕು ಕೊಡಬಹುದು. ಇದು ನಮ್ಮ ದೇಶದ ಸ್ವಾವಲಂಬನೆಯ ಪ್ರತೀಕ" ಎಂದು ಪ್ರಧಾನಿ ಹೇಳಿದರು. "ಜಗತ್ತಿನ ಕೆಲವೇ ದೇಶಗಳಿಗೆ ಸ್ವತಂತ್ರವಾಗಿ ವಿಮಾನವಾಹಕ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯವಿದೆ. ವಿಕ್ರಾಂತ್ ಮೂಲಕ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಿದೆ" ಎಂದು ಅವರು ತಿಳಿಸಿದರು.
ಐಎನ್ಎಸ್ ವಿಕ್ರಾಂತ್ ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಂಡಿದ್ದು, ಈ ಐತಿಹಾಸಿಕ ಸಂದರ್ಭದಲ್ಲಿ ನಾನು ಭಾರತೀಯ ನೌಕಾಪಡೆ, ಎಲ್ಲಾ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ವಿಕ್ರಾಂತ್ ಬೃಹತ್ ಮತ್ತು ಭವ್ಯವಾಗಿದೆ. ವಿಭಿನ್ನವಾಗಿದೆ. ವಿಕ್ರಾಂತ್ ವಿಶೇಷವಾಗಿದೆ. ವಿಕ್ರಾಂತ್ ಕೇವಲ ಯುದ್ಧನೌಕೆಯಲ್ಲ, ಇದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಈ ಯುದ್ಧ ನೌಕೆ 13 ವರ್ಷಗಳ ಸತತ ಪರಿಶ್ರಮದಿಂದ ನಿರ್ಮಾಣಗೊಂಡಿದೆ.
262 ಮೀ ಉದ್ದ ಮತ್ತು 62 ಮೀ ಅಗಲದ ವಿಕ್ರಾಂತ್ ನೌಕೆಯಲ್ಲಿ ಸುಮಾರು 2,200 ವಿಭಾಗಗಳಿವೆ. ಸುಮಾರು 1,600 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ. ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳಿವೆ.