ಲಖನೌ (ಉತ್ತರ ಪ್ರದೇಶ): ದೇಶವು ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪಾರದರ್ಶಕತೆ ಎಂಬ ಮೂರು ಮಂತ್ರಗಳೊಂದಿಗೆ ನೀತಿ ಮತ್ತು ಸ್ಥಿರತೆ, ಸಮನ್ವಯತೆ ಹಾಗೂ ವ್ಯವಹಾರವನ್ನು ಸುಲಭಗೊಳಿಸುವುದರ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಖನೌದಲ್ಲಿ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದು 8 ವರ್ಷಗಳವನ್ನು ಪೂರ್ಣಗೊಳಿಸಿದ್ದೇವೆ. ಈ ಅವಧಿಯಲ್ಲಿ ನಾವು ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪಾರದರ್ಶಕತೆ ಮಂತ್ರದ ಮೇಲೆ ಪ್ರಗತಿ ಸಾಧಿಸಿದ್ದೇವೆ. ನೀತಿ, ಸ್ಥಿರತೆ, ಸಮನ್ವಯ ಮತ್ತು ವ್ಯವಹಾರವನ್ನು ಸುಲಭಗೊಳಿಸುವುದರ ಮೇಲೆ ಕೇಂದ್ರೀಕರಿಸಿದ್ದೇವೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿಇಂದು 80 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ದಾಖಲೆಯ ಹೂಡಿಕೆಯು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದರಿಂದ ಉತ್ತರ ಪ್ರದೇಶದ ಯುವಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಇದಕ್ಕಾಗಿ ನಾನು ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕ ಪೂರ್ವಕ್ಕಿಂತಲೂ ದೇಶದ ಜಿಡಿಪಿ ಹೆಚ್ಚಳ!
ಇಂದು ಪ್ರತಿಯೊಬ್ಬ ಭಾರತೀಯ ಕೂಡ ದೇಶದ ಬೆಳವಣಿಗೆಯ ಬಗ್ಗೆ ಹೆಮ್ಮೆ ಪಡುತ್ತಿದ್ದಾನೆ. ಜಿ-20 ರಾಷ್ಟ್ರಗಳಲ್ಲಿ ಪೈಕಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಇಂಟರ್ನೆಟ್ ಬಳಕೆದಾರರ ಎರಡನೇ ಅತಿದೊಡ್ಡ ರಾಷ್ಟ್ರ ಭಾರತವಾಗಿದೆ. ಅಲ್ಲದೇ, ಜಾಗತಿಕ ಚಿಲ್ಲರೆ ಸೂಚ್ಯಂಕದಲ್ಲಿ ಭಾರತವು ಎರಡನೇ ಸ್ಥಾನ ಹೊಂದಿದೆ ಎಂದು ವಿವರಿಸಿದರು.
ಇದೇ ವೇಳೆ, ಪ್ರಮುಖ ಉದ್ಯಮಿಗಳು ಮಾತನಾಡಿ ಪ್ರಧಾನಿ ಮೋದಿಯವರ ದೂರದೃಷ್ಟಿ ಮತ್ತು ಮಾರ್ಗದರ್ಶನ ಮತ್ತು 'ನವ ಭಾರತ'ದ ಸಂಕಲ್ಪಕ್ಕೆ ಸಿಎಂ ಯೋಗಿ ಆದಿತ್ಯನಾಥ್ ನೆರವಾಗುತ್ತಿರುವ ಬಗ್ಗೆ ಶ್ಲಾಘಿಸಿದರು. ಬಿರ್ಲಾ ಗ್ರೂಪ್ಸ್ ಯುಪಿಯಲ್ಲಿ 40 ಸಾವಿರ ಕೋಟಿ ರೂ.ಗಳಷ್ಟು ಹೂಡಿಕೆ ಮಾಡುತ್ತಿದೆ. ಇದರಿಂದ 35 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕುಮಾರ್ ಮಂಗಲಂ ಬಿರ್ಲಾ ತಿಳಿಸಿದರು.
ಅದಾನಿ ಗ್ರೂಪ್ನ ಗೌತಮ್ ಅದಾನಿ ಮಾತನಾಡಿ, ತಮ್ಮ ಗ್ರೂಪ್ಸ್ನಿಂದ 70 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದ್ದು, ಇದರಿಂದ 30 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಯುಪಿಯಲ್ಲಿ ಬಂಡವಾಳದ ಸುರಿಮಳೆ: ಅದಾನಿ ಗ್ರೂಪ್ನಿಂದ ₹70 ಸಾವಿರ ಕೋಟಿ, ಬಿರ್ಲಾದಿಂದ ₹40 ಸಾವಿರ ಕೋಟಿ ಹೂಡಿಕೆ