ನವದೆಹಲಿ: ದೇಶದ ಪ್ರತಿಯೊಂದು ರಾಜ್ಯ ಕೂಡ ತನ್ನ 3ಟಿಗಳನ್ನು (ಟ್ರೇಡ್-ವ್ಯಾಪಾರ, ಟೂರಿಸಂ-ಪ್ರವಾಸೋದ್ಯಮ, ಟೆಕ್ನಾಲಜಿ-ತಂತ್ರಜ್ಞಾನ) ಪ್ರಪಂಚದಾದ್ಯಂತದ ಉತ್ತೇಜಿಸುವುದರ ಕಡೆ ಗಮನ ಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಮದು ಕಡಿಮೆ ಮಾಡುವುದು, ರಫ್ತು ಹೆಚ್ಚಿಸುವುದು ಮತ್ತು ನಂತರದ ಅವಕಾಶಗಳನ್ನು ಗುರುತಿಸುವತ್ತ ರಾಜ್ಯಗಳು ಗಮನ ಹರಿಸಬೇಕು ಎಂದು ಹೇಳಿದರು.
ಅಲ್ಲದೇ, ಸ್ಥಳೀಯ ವಸ್ತುಗಳನ್ನು ಬಳಸಲು ನಾವು ಜನರನ್ನು ಪ್ರೋತ್ಸಾಹಿಸಬೇಕು. 'ಸ್ಥಳೀಯರಿಗೆ ಧ್ವನಿ' ಎನ್ನುವುದು ವೈಯಕ್ತಿಕ ರಾಜಕೀಯ ಪಕ್ಷದ ಅಜೆಂಡಾವಲ್ಲ. ಆದರೆ, ಸಾಮಾನ್ಯ ಗುರಿಯಾಗಿದೆ. ಹೆಚ್ಚುತ್ತಿರುವ ಜಿಎಸ್ಟಿ ಸಂಗ್ರಹಣೆಗೆ ಕೇಂದ್ರ ಮತ್ತು ರಾಜ್ಯಗಳ ಒಟ್ಟಾಗಿ ಶ್ರಮಿಸುವ ಅಗತ್ಯವಿದೆ. ಇದು ನಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು 5 ಟ್ರಿಲಿಯನ್ ಡಾಲರ್ಗೆ ಆರ್ಥಿಕತೆಯನ್ನು ಕೊಂಡೊಯ್ಯಲು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಮಾತನಾಡಿದ ಅವರು, ಗಣನೀಯ ಚರ್ಚೆಗಳ ನಂತರ ಇದನ್ನು ರೂಪಿಸಲಾಗಿದೆ. ಅದರ ಅನುಷ್ಠಾನದಲ್ಲಿ ನಾವು ಎಲ್ಲರೂ ಒಳಗೊಳ್ಳಬೇಕು. ಅದಕ್ಕಾಗಿ ಸ್ಪಷ್ಟವಾದ ಕಾಲಮಿತಿಯ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡ ಸಿಎಂಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ನೀತಿ ಆಯೋಗವು ರಾಜ್ಯಗಳ ಕಾಳಜಿಗಳು, ಸವಾಲುಗಳು ಮತ್ತು ಉತ್ತಮ ಯೋಜನೆಗಳನ್ನು ಅಧ್ಯಯನ ಮಾಡುತ್ತದೆ. ನಂತರ ಮುಂದಿನ ಮಾರ್ಗದ ಬಗ್ಗೆ ಯೋಜಿಸುತ್ತದೆ ಎಂದರು.
ಜೊತೆಗೆ ಈ ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ಮುಂದಿನ 25 ವರ್ಷಗಳ ರಾಷ್ಟ್ರೀಯ ಆದ್ಯತೆಗಳನ್ನು ವ್ಯಾಖ್ಯಾನಿಸುತ್ತವೆ. ನಾವು ಇಂದು ಬಿತ್ತುವ ಬೀಜಗಳು 2047ರಲ್ಲಿ ಭಾರತಕ್ಕೆ ಫಲ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಶೀಘ್ರವೇ ಗುಜರಾತ್ನಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ವಿಲೀನ: ಕೇಜ್ರಿವಾಲ್ ಬಾಂಬ್