ನವದೆಹಲಿ: ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವ ಸಲುವಾಗಿ ವಿಜ್ಞಾನಿಗಳು ಶ್ರಮ ಪಡುತ್ತಿರುವುದನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಇದೇ ವೇಳೆ ಜಿನ್ನೋವಾ ಬಯೋ ಫಾರ್ಮಾಸುಟಿಕಲ್ಸ್ ಲಿಮಿಟೆಡ್, ಬಯೋಲಜಿಕಲ್ ಇ ಲಿಮಿಟೆಡ್ ಹಾಗೂ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ಗೆ ಕಂಪನಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂರು ಔಷಧ ಕಂಪನಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಲಸಿಕೆ ತಯಾರಿಸಲು ಔಷಧ ಕಂಪನಿಗಳು ಹಾಕುತ್ತಿರುವ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಕೊರೊನಾ ಲಸಿಕೆ ಮತ್ತು ಅದರ ಪರಿಣಾಮದ ಬಗ್ಗೆ ಸಂಬಂಧಿಸಿದ ವಿಷಯಗಳನ್ನು ಸಾಮಾನ್ಯ ಜನರಿಗೆ ಸರಳ ಭಾಷೆಯಲ್ಲಿ ತಿಳಿಸಲು ಕಂಪನಿಗಳು ಪ್ರಯತ್ನಿಸಬೇಕೆಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಜೊತೆಗೆ ಸಲಹೆಗಳನ್ನು ನೀಡಲು ಕಂಪನಿಗಳಿಗೆ ಪ್ರಧಾನಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಲಸಿಕೆಯನ್ನು ಜನರಿಗೆ ಹೇಗೆ ತಲುಪಿಸಬೇಕೆಂಬ ವಿಚಾರದ ಬಗ್ಗೆಯೂ ಕೂಡಾ ಚರ್ಚೆ ನಡೆಸಲಾಯಿತು. ಈ ವೇಳೆ ಲಸಿಕೆಗಳ ಪ್ರಯೋಗ ವಿವಿಧ ಹಂತದಲ್ಲಿದ್ದು, ಮುಂದಿನ ವರ್ಷದ ಆರಂಭದಲ್ಲಿ ಲಸಿಕೆಯ ಫಲಿತಾಂಶಗಳು ಸಿಗುವ ಸಾಧ್ಯತೆಯಿದೆ ಎಂದು ಪ್ರಧಾನಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 94 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ಸೋಮವಾರ ತಿಳಿಸಿವೆ. ಇದರಲ್ಲಿ 4,46,952 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 88,47,600 ಮಂದಿ ಗುಣಮುಖರಾಗಿದ್ದು, ಈವರೆಗೆ 1,37,139 ಮಂದಿ ಸಾವನ್ನಪ್ಪಿದ್ದಾರೆ.