ನವದೆಹಲಿ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದೆ. ಹಳೆಯ ಸವಾಲುಗಳನ್ನು ಬಿಟ್ಟು ಹೊಸ ಅವಕಾಶಗಳಿಂದ ಲಾಭ ಪಡೆಯುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ಯುವಜನತೆಗೆ ಕರೆ ಕೊಟ್ಟರು.
ವಿಡಿಯೋ ಕಾನ್ಫ್ರೆನ್ಸ್ ಮೂಲಕ ಜಮ್ಮು ಮತ್ತು ಕಾಶ್ಮೀರ ರೋಜ್‌ಗಾರ್ ಮೇಳ ಉದ್ದೇಶಿಸಿ ಮಾತನಾಡಿದ ಅವರು, ವೇಗದ ಅಭಿವೃದ್ಧಿಗಾಗಿ ಹೊಸ ವಿಧಾನ ಮತ್ತು ಹೊಸ ಚಿಂತನೆಯೊಂದಿಗೆ ಕೆಲಸ ಮಾಡುವ ಅವಶ್ಯಕತೆಯಿದೆ.
ಅಭಿವೃದ್ಧಿಯ ಲಾಭವನ್ನು ಎಲ್ಲಾ ವರ್ಗದ ನಾಗರಿಕರಿಗೆ ಸಮಾನವಾಗಿ ತಲುಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರವು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ತಾಣ. ನಾವೆಲ್ಲರೂ ಸೇರಿ ಸುಂದರ ಕಣಿವೆಯನ್ನು ಹೊಸ ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದು ಮನವಿ ಹೇಳಿದರು.
ಉದ್ಯೋಗ ಪಡೆದ ಯುವಕರಿಗೆ ಅಭಿನಂದನೆ: ಪಿಡಬ್ಲ್ಯೂಡಿ, ಆರೋಗ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಶುಸಂಗೋಪನೆ, ಜಲಶಕ್ತಿ ಮತ್ತು ಶಿಕ್ಷಣದಂತಹ ಸರ್ಕಾರಿ ಹುದ್ದೆ ಪಡೆದು ವಿವಿಧೆಡೆ ನಿಯೋಜನೆಯಾಗಿರುವ 3 ಸಾವಿರ ಯುವಕರನ್ನು ಪ್ರಧಾನಿ ಮೋದಿ ಇದೇ ವೇಳೆ ಅಭಿನಂದಿಸಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಇತರ ಇಲಾಖೆಗಳಲ್ಲಿ 700 ಕ್ಕೂ ಹೆಚ್ಚು ನೇಮಕಾತಿ ಬಾಕಿ ಇವೆ. ಇವುಗಳನ್ನು ಶೀಘ್ರವೇ ಭರ್ತಿ ಮಾಡಿ ನೇಮಕಾತಿ ಪತ್ರಗಳನ್ನು ಹಂಚಲಾಗುವುದು ಎಂದು ಭರವಸೆ ನೀಡಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ ಬಗ್ಗೆಯೂ ಉಲ್ಲೇಖಿಸಿದ ಪ್ರಧಾನಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆಯಿಂದಾಗಿ ಕಣಿವೆಯ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನ ಪಡೆದುಕೊಂಡಿದೆ ಎಂದರು.
ಇದನ್ನೂ ಓದಿ: ಪತ್ರಕರ್ತರಿಗೆ ಉಡುಗೊರೆ ಪ್ರಕರಣ ಕಾಂಗ್ರೆಸ್ ಟೂಲ್ ಕಿಟ್ ಭಾಗ: ಸಿಎಂ ಬೊಮ್ಮಾಯಿ