ನವದೆಹಲಿ : ಹಳೆಯ ಸಂಸತ್ ಭವನವು ಸ್ವಾತಂತ್ರ್ಯೋತ್ತರ ಭಾರತಕ್ಕೆ ನಿರ್ದೇಶನ ನೀಡಿದ್ರೆ, ನೂತನ ಕಟ್ಟಡವು 'ಆತ್ಮನಿರ್ಭರ ಭಾರತ'ದ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. ಇದೊಂದು ಐತಿಹಾಸಿಕ ದಿನವಾಗಿದೆ. ಭಾರತೀಯರಾದ ನಾವು ಈ ಹೊಸ ಕಟ್ಟಡವನ್ನು ಒಟ್ಟಾಗಿ ನಿರ್ಮಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ (ಭೂಮಿ ಪೂಜೆ)ಯನ್ನು ಪಿಎಂ ಮೋದಿ ನೆರವೇರಿಸಿದರು. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಮುಖಂಡರು, ವಿವಿಧ ಭಾಷೆಗಳಲ್ಲಿ 'ಸರ್ವ ಧರ್ಮ ಪ್ರಾರ್ಥನೆ' ಸಲ್ಲಿಸಿದರು.
ಅಡಿಪಾಯ ಹಾಕಿ ಬಳಿಕ ಮಾತನಾಡಿದ ಮೋದಿ, 130 ಕೋಟಿಗೂ ಹೆಚ್ಚು ಭಾರತೀಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇದು ಹೆಮ್ಮೆಯ ದಿನವಾಗಿದೆ. ಹಳೆಯ ಕಟ್ಟಡದಲ್ಲಿ ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸುವ ಕೆಲಸವನ್ನು ಮಾಡಲಾಯಿತು.
ಹೊಸ ಕಟ್ಟಡದಲ್ಲಿ 21ನೇ ಶತಮಾನದ ಭಾರತದ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲಾಗುತ್ತದೆ. ಸಮಯ ಮತ್ತು ಅಗತ್ಯಗಳಿಗೆ ಅನುಗುಣವಾಗಿ ತನ್ನೊಳಗೆ ಬದಲಾವಣೆಗಳನ್ನು ಮಾಡುವ ಪ್ರಯತ್ನ ಇದಾಗಿದೆ ಎಂದರು.
ಭಾರತದಲ್ಲಿ ಪ್ರಜಾಪ್ರಭುತ್ವವು ಒಂದು ಸಂಸ್ಕೃತಿ, ಒಂದು ಜೀವನ ಮೌಲ್ಯ, ಒಂದು ಜೀವನ ವಿಧಾನ ಹಾಗೂ ರಾಷ್ಟ್ರದ ಜೀವನದ ಆತ್ಮವಾಗಿದೆ. ನಮ್ಮ ದೇಶದ ಪ್ರಜಾಪ್ರಭುತ್ವವು ಶತಮಾನಗಳ ಅನುಭವದೊಂದಿಗೆ ಅಭಿವೃದ್ಧಿಪಡಿಸಿದ ವ್ಯವಸ್ಥೆಯಾಗಿದೆ.

ಸಂಸದರಾಗಿ 2014ರಲ್ಲಿ ಮೊದಲ ಬಾರಿಗೆ ಸಂಸತ್ ಭವನಕ್ಕೆ ಬರಲು ನನಗೆ ಅವಕಾಶ ದೊರೆತ ಕ್ಷಣವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ದೇಗುಲಕ್ಕೆ ಕಾಲಿಡುವ ಮೊದಲು ಸಂಸತ್ತು ಎಂಬ ಪ್ರಜಾಪ್ರಭುತ್ವದ ದೇವಾಲಯಕ್ಕೆ ತಲೆಬಾಗಿ ನಮಸ್ಕರಿಸಿದ್ದೇನೆ ಎಂದು ಪ್ರಧಾನಿ ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ವಿದೇಶಿ ರಾಯಭಾರಿಗಳು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ, ಕೇಂದ್ರ ಸಚಿವ ಹೆಚ್ ಎಸ್ ಪುರಿ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ ಮತ್ತು ವಿವಿಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
971ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಂಸತ್ ಭವನವನ್ನು ಈಗಿರುವ ಸಂಸತ್ ಭವನದ 118ನೇ ಫ್ಲಾಟ್ನಲ್ಲಿ 64,500 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಇದು ಹಳೆಯ ಸಂಸತ್ತಿನ ಕಟ್ಟಡಕ್ಕಿಂತ 17,000 ಚ. ಮೀ ದೊಡ್ಡದಾಗಿರಲಿದೆ. ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಸಂಸತ್ ನಿರ್ಮಾಣ ಯೋಜನೆಯ ಗುತ್ತಿಗೆ ನೀಡಲಾಗಿದೆ.