ಗುವಾಹಟಿ : ಅಸ್ಸೋಂ ಮತ್ತು ಇತರ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಆಯೋಗ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ.
ಪೂರ್ವ ಅಸ್ಸೋಂನ ಧೆಮಾಜಿ ಜಿಲ್ಲೆಯ ಸಿಲಾಪಥಾರ್ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, "ಈ ಹಿಂದೆ ಅಂದರೆ 2016ರಲ್ಲಿ ಅಸ್ಸೋಂ ವಿಧಾನಸಭೆ ಚುನಾವಣಾ ದಿನಾಂಕವನ್ನು ಮಾರ್ಚ್ 4ರಂದು ಘೋಷಿಸಲಾಗಿತ್ತು. ಈ ಬಾರಿ ಕೂಡ ಮಾರ್ಚ್ ಮೊದಲ ವಾರದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಆದ್ರೆ, ಇದು ಚುನಾವಣಾ ಆಯೋಗದ ಕೆಲಸವಾಗಿದೆ" ಎಂದರು.
ಓದಿ:2025ರ ವೇಳೆಗೆ ಭಾರತವನ್ನ ಕ್ಷಯರೋಗ ಮುಕ್ತ ಮಾಡುತ್ತೇವೆ: ಪ್ರಧಾನಿ ಮೋದಿ ಅಭಯ
ಚುನಾವಣೆಯ ಹಿನ್ನೆಲೆ ನಾನು ಅಸ್ಸೋಂ, ಪಶ್ಚಿಮಬಂಗಾಳ, ಪುದುಚೇರಿ, ತಮಿಳುನಾಡು ಮತ್ತು ಕೇರಳಕ್ಕೆ ಎಷ್ಟು ಸಾಧ್ಯವೋ ಅಷ್ಟು ಭೇಟಿ ನೀಡುತ್ತೇನೆ ಎಂದು 3,222 ಕೋಟಿ ರೂ.ಗಳ ಐದು ಮೆಗಾ ಯೋಜನೆಗಳನ್ನು ಉದ್ಘಾಟಿಸಿದ ನಂತರ ಪ್ರಧಾನಿ ಹೇಳಿದರು.
ಅಸ್ಸೋಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ನೇತೃತ್ವದ ಆಯೋಗವೂ ಈಗಾಗಲೇ ಎಲ್ಲಾ ಐದು ರಾಜ್ಯಗಳಿಗೆ ಭೇಟಿ ನೀಡಿ ರಾಜಕೀಯ ಪಕ್ಷಗಳು, ಅಧಿಕಾರಿಗಳು ಮತ್ತು ಇತರರೊಂದಿಗೆ ಸಭೆ ನಡೆಸಿದೆ.