ನವದೆಹಲಿ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಯಾರಿಸಿದ 1 ಲಕ್ಷ 50 ಸಾವಿರ ಸಂಖ್ಯೆಯ ಆಕ್ಸಿಕೇರ್ ಸಿಸ್ಟಮ್ಗಳನ್ನು 322.5 ಕೋಟಿ ರೂಪಾಯಿ ನೀಡಿ ಪಡೆದುಕೊಳ್ಳಲು ಪಿಎಂ ಕೇರ್ಸ್ ಫಂಡ್ ಅನುಮೋದನೆ ನೀಡಿದೆ. ಬುಧವಾರ ಡಿಆರ್ಡಿಓ ಸ್ವತಃ ಈ ಮಾಹಿತಿ ನೀಡಿದೆ.
ಆಕ್ಸಿಕೇರ್ ಸಿಸ್ಟಮ್ ಇದು SpO2 ಆಧರಿತ ಆಕ್ಸಿಜನ್ ಪೂರೈಕೆ ವ್ಯವಸ್ಥೆಯಾಗಿದ್ದು, ಸೆನ್ಸಡ್ SpO2 ಲೆವೆಲ್ ಆಧಾರದಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಕ್ಸಿಜನ್ ಮಟ್ಟವನ್ನು ನಿರ್ವಹಿಸುತ್ತದೆ.
"ಪಿಎಂ ಕೇರ್ಸ್ ಅನುಮೋದನೆಯಡಿ, 1 ಲಕ್ಷ ಮ್ಯಾನುವಲ್ ಹಾಗೂ 50 ಸಾವಿರ ಅಟೊಮ್ಯಾಟಿಕ್ ಆಕ್ಸಿಕೇರ್ ಸಿಸ್ಟಮ್ಗಳು ಹಾಗೂ ಎನ್ಆರ್ಬಿಎಂ ಮಾಸ್ಕ್ (Non-rebreather mask) ಗಳನ್ನು ಪೂರೈಸಲಾಗುತ್ತಿದೆ. ಆಕ್ಸಿಕೇರ್ ಸಿಸ್ಟಮ್ ಇದು SpO2 ಲೆವೆಲ್ ಆಧಾರದಲ್ಲಿ ಪೂರಕ ಆಕ್ಸಿಜನ್ ಅನ್ನು ಪೂರೈಸುತ್ತದೆ. ಈ ಮೂಲಕ ರೋಗಿಯು ಮಾರಣಾಂತಿಕವಾದ ಹೈಪೋಕ್ಸಿಯಾ ಹಂತಕ್ಕೆ ಹೋಗುವುದನ್ನು ತಡೆಗಟ್ಟಬಹುದು." ಎಂದು ಡಿಆರ್ಡಿಒ ಹೇಳಿದೆ.
ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಕರ್ತವ್ಯ ನಿರ್ವಹಿಸುವ ರಕ್ಷಣಾ ಪಡೆಯ ಯೋಧರಿಗಾಗಿ ಡಿಫೆನ್ಸ್ ಬಯೊ ಇಂಜಿನಿಯರಿಂಗ್ ಅಂಡ್ ಎಲೆಕ್ಟ್ರೊ ಮೆಡಿಕಲ್ ಲ್ಯಾಬೊರೇಟರಿ (ಡಿಆರ್ಡಿಒ ಅಂಗಸಂಸ್ಥೆ) ಈ ವ್ಯವಸ್ಥೆಯನ್ನು ತಯಾರಿಸಿದೆ. ಈಗ ಈ ಸಾಧನವು ಕೋವಿಡ್ ರೋಗಿಗಳ ಪೂರಕ ಚಿಕಿತ್ಸೆಯಲ್ಲಿ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ.
(ಓದಿ : ಕೋವಿಡ್ ನಿಯಂತ್ರಣಕ್ಕೆ 6 ರಿಂದ 8 ವಾರಗಳ ಲಾಕ್ಡೌನ್ ಅನಿವಾರ್ಯ: ಐಸಿಎಂಆರ್ ಮುಖ್ಯಸ್ಥ)