ಕಾನ್ಪುರ್(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಮತ್ತು ಉದ್ಯಮಿಯಾಗಿರುವ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣವನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ. ಇದರ ಮಧ್ಯೆ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ.
ನೂರಾರು ಕೋಟಿ ರೂ. ಒಡೆಯನಾಗಿದ್ದ ಪಿಯೂಷ್ ಜೈನ್ ತಮ್ಮ ಮನೆಯಿಂದ ಕನೌಜ್ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಲು ಹಳೇ ಕಾಲದ ಸ್ಕೂಟರ್ ಬಳಸುತ್ತಿದ್ದರಂತೆ. ಮನೆಯ ಹೊರಗಡೆ ಕ್ವಾಲಿಸ್ ಹಾಗೂ ಮಾರುತಿ ಕಾರು ಇದ್ದರೂ, ಹಳೆಯ ಸ್ಕೂಟರ್ನಲ್ಲೇ ತೆರಳುತ್ತಿದ್ದರು. ಜೊತೆಗೆ ರಬ್ಬರ್ ಚಪ್ಪಲಿ ಧರಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಸ್ಕೂಟರ್ ಪಿಯೂಷ್ ಜೈನ್ ಅವರಿಗೆ ಮದುವೆ ಸಂದರ್ಭದಲ್ಲಿ ಪತ್ನಿ ಮನೆಯವರು ಉಡುಗೊರೆಯಾಗಿ ನೀಡಿದ್ದರೆಂದು ತಿಳಿದುಬಂದಿದೆ.
ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಅಧಿಕಾರಿಗಳು ಅವರ ಮನೆಯ ಮೇಲೆ ದಾಳಿ ನಡೆಸಿದಾಗ 250 ಕೋಟಿ ರೂ. ನಗದು, 23 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದರು. ಇಂದು ಕೂಡ ಅವರ ಕಂಪನಿ ಮೇಲೆ ದಾಳಿ ನಡೆಸಿದಾಗ 17 ಕೋಟಿ ರೂ. ನಗದು ಹಾಗೂ 600 ಕೆಜಿ ಶ್ರೀಗಂಧದ ತೈಲ ಪತ್ತೆಯಾಗಿದೆ. ಪಿಯೂಷ್ ಜೈನ್ ಸುಗಂಧ ದ್ರವ್ಯ ತಯಾರಿಸುವ ಕಲೆಯನ್ನ ಅವರ ತಂದೆಯಿಂದ ಕರಗತ ಮಾಡಿಕೊಂಡಿದ್ದರು. ಆರಂಭದಲ್ಲಿ ಕಾನ್ಪುರ್ದಲ್ಲಿ ಸುಗಂಧ ದ್ರವ್ಯ ವ್ಯಾಪಾರ ಆರಂಭ ಮಾಡಿದ್ದ ಇವರು, ಕಳೆದ 15ವರ್ಷಗಳಲ್ಲಿ ದೇಶದ ಹಲವು ಭಾಗಗಳಿಗೆ ಅದರ ವಿಸ್ತರಣೆ ಮಾಡಿದ್ದಾರೆ. ಮುಂಬೈ ಹಾಗೂ ಗುಜರಾತ್ನಲ್ಲಿ ಭರ್ಜರಿ ವ್ಯಾಪಾರ ನಡೆಸಿದ್ದರು.
![ncome Tax Raid in uttar pradesh](https://etvbharatimages.akamaized.net/etvbharat/prod-images/up-knj-04-in-whose-house-kubers-treasure-came-out-piyush-jain-lived-in-simplicity-in-the-locality-dry-up10089_27122021181905_2712f_1640609345_677.jpg)
ವ್ಯಾಪಾರ ಉನ್ನತ ಮಟ್ಟಕ್ಕೆ ತಲುಪುತ್ತಿದ್ದಂತೆ 700 ಚದರ್ ಮೀಟರ್ ವಿಸ್ತೀರ್ಣದಲ್ಲಿ ಸುಂದರವಾದ ಬಂಗಲೆ ನಿರ್ಮಿಸಿರುವ ಪಿಯೂಷ್, ಊರಿಗೆ ಬಂದಾಗಲೆಲ್ಲ ತಮ್ಮ ಹಳೇ ಸ್ಕೂಟರ್ ಮೇಲೆ ಸುತ್ತಾಡುತ್ತಿದ್ದರು.
![Kanpur IT Raid](https://etvbharatimages.akamaized.net/etvbharat/prod-images/14024510_p.jpeg)
ಕಾನ್ಪುರ ನಗರದ ನಿವಾಸಿಗಳಾದ ಪಿಯೂಷ್ ಜೈನ್ ಮತ್ತು ಅವರ ಸಹೋದರ ಅಂಬರೀಶ್ ಜೈನ್ ಸುಗಂಧ ದ್ರವ್ಯಗಳ ವ್ಯಾಪಾರದಲ್ಲಿ ಅತಿ ದೊಡ್ಡ ಉದ್ಯಮಿಗಳಾಗಿದ್ದು, ಇದರ ಜೊತೆಗೆ ಪಾನ್ ಮಸಾಲಾದಲ್ಲಿ ಬಳಸುವ ಪರಿಮಳಯುಕ್ತ ಪದಾರ್ಥಗಳನ್ನು ಇವರ ಕಂಪನಿ ಉತ್ಪಾದನೆ ಮಾಡುತ್ತದೆ. ಇವರ ಕಂಪನಿಯಾದ ಓಡೋ ವಿದೇಶಕ್ಕೂ ಸರಕುಗಳನ್ನು ಪೂರೈಸುತ್ತದೆ. ನಕಲಿ ಸಂಸ್ಥೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯ ಜಿಎಸ್ಟಿಯನ್ನು ಪಿಯೂಷ್ ಜೈನ್ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಅವರ ಮನೆ ಹಾಗೂ ಕಂಪನಿಗಳ ಮೇಲೆ ದಾಳಿ ನಡೆಸಲಾಗಿತ್ತು. ಪಿಯೂಷ್ ಜೈನ್ ಅವರನ್ನ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.