ನವದೆಹಲಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆಗೆ ಬಳಸುವ ರೆಮ್ಡಿಸಿವಿರ್ ಚುಚ್ಚುಮದ್ದುಗಳನ್ನು ರಾಜಕಾರಣಿಗಳು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಆರೋಪದಡಿ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ಔಷಧಿ ಸಿಗದೆ ಜನರು ಪರದಾಡುತ್ತಿರುವ ಪರಿಸ್ಥಿತಿಯಿರುವಾಗ ರಾಜಕಾರಣಿಗಳು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಅನುಮತಿ ಪಡೆಯದೆ ಹೇಗೆ ರೆಮ್ಡಿಸಿವಿರ್ ಸಂಗ್ರಹಿಸಿ, ವಿತರಿಸಲು ಸಮರ್ಥರಾಗಿದ್ದಾರೆ ಎಂದು ಪಿಐಎಲ್ನಲ್ಲಿ ಪ್ರಶ್ನಿಸಲಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು, ಸೂಕ್ತ ತನಿಖೆಯಾಗಬೇಕೆಂದು ಕೋರಲಾಗಿದೆ.
ಇದನ್ನೂ ಓದಿ: ನಕಲಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್
ಹೃದಯ ಫೌಂಡೇಶನ್‌ನ ಅಧ್ಯಕ್ಷ ಮತ್ತು ರಾಷ್ಟ್ರಮಟ್ಟದ ಶೂಟರ್ ದೀಪಕ್ ಸಿಂಗ್ ನೀಡಿರುವ ಈ ಅರ್ಜಿಯನ್ನು ವಕೀಲ ವಿರಾಗ್ ಗುಪ್ತಾ ಅವರು ದೆಹಲಿ ಹೈಕೋರ್ಟ್ ನ್ಯಾ. ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ನೇತೃತ್ವದ ನ್ಯಾಯಪೀಠದ ಮುಂದೆ ಸಲ್ಲಿಸಿದ್ದಾರೆ.
'ಮೆಡಿಕಲ್ ಮಾಫಿಯಾ'
ಒಬ್ಬರ ಸ್ವಂತ ರಾಜಕೀಯ ಲಾಭಕ್ಕಾಗಿ ಔಷಧಿಗಳನ್ನು ಬಳಸುವುದು ಅತ್ಯಂತ ಗಂಭೀರ ಅಪರಾಧವಾಗಿದ್ದು, ಇದು ಭಾರತದಾದ್ಯಂತದ ಕೊರೊನಾ ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯ ಪಕ್ಷಗಳು ಅಧಿಕಾರಗಳ ಲಾಭವನ್ನು ಪಡೆದುಕೊಂಡು ಮೆಡಿಕಲ್ ಮಾಫಿಯಾಗಳಿಗೆ ಪ್ರೋತ್ಸಾಹ ನೀಡುತ್ತಿವೆ ಎಂದು ಅರ್ಜಿದಾರ ದೀಪಕ್ ಸಿಂಗ್ ಹೇಳಿದ್ದಾರೆ.