ನವದೆಹಲಿ: ಇಂಧನ ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಕೇಂದ್ರ ಸರ್ಕಾರ ಟ್ಯಾಕ್ಸ್ ರಿಕವರಿ ವಿಚಾರದಲ್ಲಿ ಪಿಹೆಚ್ಡಿ ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರವು ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಗಿಂತ ಹೆಚ್ಚಿನ ಆದಾಯವನ್ನು ಪೆಟ್ರೋಲ್ ಮತ್ತು ಡಿಸೇಲ್ನಿಂದ ಪಡೆದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿ, ತಲೆಬರಹ ನೀಡಿತ್ತು. ಇದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ 'ಟ್ಯಾಕ್ಸ್ ವಸೂಲಿ ಮೆ ಪಿಹೆಚ್ಡಿ'( ಟ್ಯಾಕ್ಸ್ ವಸೂಲಿಯಲ್ಲಿ ಪಿಹೆಚ್ಡಿ) ಎಂದು ವ್ಯಂಗ್ಯವಾಡಿದ್ದಾರೆ.
ಇಂಧನ ಬೆಲೆಗಳಲ್ಲೂ ಸಾಕಷ್ಟು ಏರಿಕೆಯಾಗಿದ್ದು, ಹಲವಾರು ನಗರಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಒಂದು ದಿನ ಸ್ವಲ್ಪ ಮಟ್ಟಿಗೆ ಸ್ಥಿರವಾಗಿದ್ದ ಇಂಧನ ಬೆಲೆ ಈಗ ಮತ್ತೆ ಏರಿಕೆ ಕಂಡಿದೆ. ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿವೆ.
ಇದನ್ನೂ ಓದಿ: ನೆಲಮಂಗಲದಲ್ಲಿ ನರಬಲಿ ಯತ್ನ: 10 ವರ್ಷದ ಬಾಲಕಿಯ ಮೇಲೆ ವಾಮಾಚಾರ
ಕೆಲವು ದಿನಗಳ ಹಿಂದಷ್ಟೇ ಭಾರತದಲ್ಲಿ ಬಡತನದ ಕುರಿತು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ತಮ್ಮ ತಪ್ಪು ಒಪ್ಪಿಕೊಂಡು, ಭಾರತದ ಮರು ನಿರ್ಮಾಣಕ್ಕಾಗಿ ತಜ್ಞರ ಸಲಹೆ ಪಡೆದುಕೊಳ್ಳಲಿ. ಹಾಗಾದಾಗ ಮಾತ್ರ ಭಾರತ ಮರುಕಟ್ಟಲು ಸಾಧ್ಯ ಎಂದು ಸಲಹೆ ನೀಡಿದ್ದರು.