ಶ್ರೀನಗರ(ಜಮ್ಮು-ಕಾಶ್ಮೀರ): ಆನ್‌ಲೈನ್ ಮ್ಯಾಗಜೀನ್‌ನಲ್ಲಿ 'ತೀರ ಪ್ರಚೋದನಕಾರಿ ಮತ್ತು ದೇಶದ್ರೋಹ'ದ ಲೇಖನ ಬರೆದ ಆರೋಪದಡಿ ಪಿಎಚ್‌ಡಿ ಸ್ಕಾಲರ್ನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ)ಯ ಅಧಿಕಾರಿಗಳು ರವಿವಾರ ಬಂಧಿಸಿದ್ದಾರೆ. ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಹಲವೆಡೆ ನಡೆದ ಶೋಧ ಕಾರ್ಯಾಚರಣೆಯ ಭಾಗವಾಗಿ ಈತನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರದ ಹೊರವಲಯದ ಹುಮ್‌ಹಮಾ ನಿವಾಸಿಯಾದ ಪಿಎಚ್‌ಡಿ ಸ್ಕಾಲರ್ ಅಬ್ದುಲ್ ಆಲಾ ಫಾಜಿಲಿ ಬಂಧಿತ. 'ದಿ ಕಾಶ್ಮೀರ್ ವಾಲಾ' ಎಂಬ ಮ್ಯಾಗಜೀನ್‌ನಲ್ಲಿ 'ಗುಲಾಮಗಿರಿಯ ಸಂಕೋಲೆಗಳು ಮುರಿದು ಬೀಳುತ್ತವೆ' ಎಂಬ ಲೇಖನೆಯನ್ನು ಫಾಜಿಲಿ ಬರೆದಿದ್ದ. ಈ ಲೇಖನೆಯು 'ತೀರ ಪ್ರಚೋದನಕಾರಿ ಮತ್ತು ದೇಶದ್ರೋಹ'ದಿಂದ ಕೂಡಿತ್ತು. ಅಲ್ಲದೇ, ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದನೆ ವೈಭವೀಕರಿಸುವ ಮೂಲಕ ಹಿಂಸಾಚಾರದ ಹಾದಿಗೆ ಎಳೆಯಲು ಯುವಕರನ್ನು ಪ್ರೇರೇಪಿಸುವ ದುರುದ್ದೇಶದಿಂದ ಕೂಡಿತ್ತು ಎನ್ನಲಾಗಿದೆ.
ಅಬ್ದುಲ್ ಫಾಜಿಲಿ ಮತ್ತು ಮ್ಯಾಗಜೀನ್ ಸಂಪಾದಕ ಫರ್ಹಾದ್ ಶಾ ಹಾಗೂ ಇತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು. ಅದರಂತೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿ ಫಾಜಿಲಿನನ್ನು ಬಂಧಿಸಿದ್ದಾರೆ. ಜತೆಗೆ ರಾಜ್‌ಬಾಗ್‌ನಲ್ಲಿರುವ 'ದಿ ಕಾಶ್ಮೀರ್ ವಾಲಾ' ಕಚೇರಿ ಹಾಗೂ ಈಗಾಗಲೇ ಜೈಲು ಸೇರಿರುವ ಮ್ಯಾಗಜೀನ್ ಸಂಪಾದಕ ಫರ್ಹಾದ್ ಶಾ ಮನೆಯಲ್ಲೂ ಶೋಧ ನಡೆಸಿದ್ದಾರೆ. ಈ ವೇಳೆ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಫಾಜಿಲಿ ಪಿಎಚ್‌ಡಿ ಮಾಡಲು ಮೌಲಾನಾ ಆಜಾದ್ ನ್ಯಾಷನಲ್ ಫೆಲೋಶಿಪ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಐದು ವರ್ಷಗಳ ಕಾಲ ಮಾಸಿಕ 30 ಸಾವಿರ ರೂ. ಪಡೆದಿದ್ದ. ಈ ಫೆಲೋಶಿಪ್ ಕಾರಣದಿಂದಲೇ ತನಗೆ ಫಾರ್ಮಾಸ್ಯುಟಿಕಲ್ ಸೈನ್ಸಸ್ ವಿಭಾಗದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದ.
ಇದನ್ನೂ ಓದಿ: ರೇಪ್ ಕೇಸ್ನಲ್ಲಿ ಅಮಾನತುಗೊಂಡ ಡಿಎಸ್ಪಿಯಿಂದ ಸಂತ್ರಸ್ತೆಗೆ ಕೊಲೆ ಬೆದರಿಕೆ