ಹೈದರಾಬಾದ್: ವೈದ್ಯಕೀಯ ಶಿಕ್ಷಣದಲ್ಲಿ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಪಿಜಿ ವೈದ್ಯಕೀಯ ಸೀಟು ಪಡೆದುಕೊಂಡಿದ್ದಾರೆ. ಖಮ್ಮಂ ನಿವಾಸಿ 29 ವರ್ಷದ ಡಾ.ರುತ್ಪಾಲ್ ಜಾನ್ ತುಂಬಾ ಕಷ್ಟಪಟ್ಟು ಅಧ್ಯಯನ ಮಾಡಿದರು. ಕಠಿಣ ಪರಿಶ್ರಮದಿಂದ ಎಂಬಿಬಿಎಸ್ ಮುಗಿಸಿ ಸದ್ಯ ಹೈದರಾಬಾದ್ನ ಉಸ್ಮಾನಿಯಾ ಮೆಡಿಕಲ್ ಕಾಲೇಜಿನ ಎಆರ್ಟಿ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹೊಂದಿರುವ ಬಡ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ.
ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚಿನ ವ್ಯಾಸಂಗ ಮಾಡಬೇಕೆಂಬುದು ಡಾ.ರುತ್ಪಾಲ್ ಜಾನ್ ಅವರ ಆಶಯ. ಒಂದೆಡೆ ಕೆಲಸ ಮಾಡುತ್ತಾ, ಮತ್ತೊಂದೆಡೆ ಕಷ್ಟಪಟ್ಟು ಓದಿ ಪಿಜಿ ನೀಟ್‌ನಲ್ಲಿ ರ್‍ಯಾಂಕ್ ಗಳಿಸಿದರು. ಇತ್ತೀಚೆಗೆ ಹೈದರಾಬಾದ್ನ ಸನತ್ ನಗರದ ಇಎಸ್‌ಐ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ತುರ್ತು ಕೋರ್ಸ್‌ನಲ್ಲಿ ಸೀಟು ಪಡೆದರು. ಆದರೆ, ಶುಲ್ಕಕ್ಕಾಗಿ 2.50 ಲಕ್ಷ ರೂ.ವರೆಗೆ ಹಣ ಬೇಕಿತ್ತು. ಉಸ್ಮಾನಿಯಾ ಆಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದರ್ ಅವರ ಉಪಕ್ರಮದ ಮೇರೆಗೆ ವೈದ್ಯರು ಮತ್ತು ಇತರ ಸಿಬ್ಬಂದಿ 1 ಲಕ್ಷ ರೂ. ಹಣದ ಸಹಾಯ ಮಾಡಿದ್ದಾರೆ.
ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಮತ್ತು ಸೀಡ್ ದತ್ತಿ ಸಂಸ್ಥೆಗಳಿಂದ ಇನ್ನೂ 1.5 ಲಕ್ಷ ರೂ.ವನ್ನು ನೀಡಿದರು. ಇದಕ್ಕಾಗಿ ಆಕೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಾನು ಕಲಿತ ವಿದ್ಯೆಯಿಂದ ಬಡವರ ಹಾಗೂ ತನ್ನಂತಹ ಜನರ ಸೇವೆ ಮಾಡುತ್ತೇನೆ ಎಂದು ಡಾ.ರುತ್ಪಾಲ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ. "ನೀಟ್ ಸ್ನಾತಕೋತ್ತರ ಪದವಿಯ ಕೌನ್ಸೆಲಿಂಗ್‌ನಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ಸೀಟು ಕಾಯ್ದಿರಿಸಬೇಕೆಂಬ ನನ್ನ ಮನವಿಯನ್ನು ಹೈಕೋರ್ಟ್ ಆಲಿಸಿದೆ" ಎನ್ನುತ್ತಾರೆ ರೂತ್.
ಇತ್ತೀಚಿನ ಪ್ರಕರಣ, ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಆಯ್ಕೆಯಾಗಿದ್ದ ತೃತೀಯಲಿಂಗಿ: ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ನೀರಮಾನವಿ ಗ್ರಾಮದ ಪೂಜಾ ತೃತೀಯಲಿಂಗಿಗಳಿಗೆ ಇರುವ ಮೀಸಲಾತಿ ಸದ್ಬಳಕೆ ಮಾಡಿಕೊಂಡು ಶಿಕ್ಷಕಿಯಾಗಿ ಆಯ್ಕೆಯಾಗಿದ್ದರು. ರಾಜ್ಯ ಶಿಕ್ಷಣ ಇಲಾಖೆ ಕಳೆದ ವರ್ಷ(2022) ಮಾರ್ಚ್ ತಿಂಗಳಲ್ಲಿ ಜರುಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಧಿಕೃತ ತೃತೀಯಲಿಂಗಿ ಮೀಸಲಾತಿಯಲ್ಲಿ ಪರೀಕ್ಷೆ ಎದುರಿಸಿದ್ದರು. ಬಳಿಕ ಸಮಾಜ ವಿಜ್ಞಾನ ವಿಷಯದ ಶಿಕ್ಷಕಿಯಾಗಿ ಆಯ್ಕೆಯಾಗಿದ್ದರು. ನೀರಮಾನವಿ ಗ್ರಾಮ ಸೇರಿದಂತೆ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದರು.
''ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಿದ್ದೆವು. ಸುಪ್ರೀಂಕೋರ್ಟ್ ನಮಗೂ ಶೇ 1ರಷ್ಟು ಮೀಸಲಾತಿ ತೀರ್ಪು ನೀಡಿರುವುದು ಹೊಸ ಆಶಾಭಾವನೆ ನೀಡಿದೆ. ಶಿಕ್ಷಕಿಯಾಗಿ ಆಯ್ಕೆಯಾಗಿರುವುದರಿಂದ ಆ ಸಂತೋಷ ಮತಷ್ಟು ಹೆಚ್ಚಿಸಿದೆ'' ಎಂದು ಪೂಜಾ ಸಂತಸ ಹಂಚಿಕೊಂಡಿದ್ದರು.
ಇದನ್ನೂ ಓದಿ: 'ಈ ಪದಕವು ಒಲಿಂಪಿಕ್ಸ್‌ಗೆ ಮುನ್ನ ನಮಗೆ ಆತ್ಮವಿಶ್ವಾಸ ನೀಡುತ್ತದೆ': ಬಿಲ್ಲುಗಾರಿಕೆ ವಿಶ್ವಕಪ್ ಪದಕ ವಿಜೇತೆ ಸಿಮ್ರಂಜೀತ್ ಕೌರ್