ನವದೆಹಲಿ: ಸತತ ಆರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ದರ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರ್‌ಗೆ 35 ಪೈಸೆ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 4 ರೂಪಾಯಿ, ಡೀಸೆಲ್ ಬೆಲೆ 4.10 ರೂಪಾಯಿಗೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ ಭಾನುವಾರ 99.11 ರೂಪಾಯಿ ಇದ್ದು, ಈಗ 99.41 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ದರ ಬೆಲೆ ಭಾನುವಾರ ಲೀಟರ್‌ಗೆ 90.42ರೂಪಾಯಿ ಇದ್ದು, ಇಂದು 90.77 ರೂಪಾಯಿಗೆ ಏರಿಕೆಯಾಗಿದೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಲಾಗಿದ್ದು, ರಾಜ್ಯಗಳ ಸ್ಥಳೀಯ ತೆರಿಗೆಯವನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಪಂಚರಾಜ್ಯಗಳ ಚುನಾವಣೆಯ ವೇಳೆ ಸುಮಾರು ನಾಲ್ಕು ತಿಂಗಳು ತೈಲ ಬೆಲೆಗಳಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಇರಲಿಲ್ಲ. ಪಂಚರಾಜ್ಯಗಳ ಚುನಾವಣೆ ನಡೆದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಸತತವಾಗಿ ಆರು ಬಾರಿ ಏರಿಕೆಯಾಗಿದೆ. ಭಾನುವಾರ, ಪೆಟ್ರೋಲ್ ಬೆಲೆ ಲೀಟರ್‌ಗೆ 50 ಪೈಸೆ ಮತ್ತು ಡೀಸೆಲ್ ಬೆಲೆ 55 ಪೈಸೆಗಳಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಲೀಟರ್‌ಗೆ 104.78 ರೂಪಾಯಿ, ಡೀಸೆಲ್ ಬೆಲೆ ಲೀಟರ್‌ಗೆ 89.02 ರೂಪಾಯಿ ಇದೆ.
ಚುನಾವಣಾ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ತಡೆಹಿಡಿದ ಕಾರಣದಿಂದ ದೇಶದ ತೈಲ ವ್ಯಾಪಾರಿಗಳು 19,000 ಕೋಟಿ ರೂಪಾಯಿ ಲಾಭವನ್ನು ಕಳೆದುಕೊಂಡಿದ್ದಾರೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ಕಳೆದ ವಾರ ಹೇಳಿದೆ. ತೈಲ ಕಂಪನಿಗಳು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 13.1 ರೂಪಾಯಿಯಿಂದ 24.9 ರೂಪಾಯಿವರೆಗೆ ಮತ್ತು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 10.6 ರೂಪಾಯಿಯಿಂದ 22.3 ರೂಪಾಯಿವರೆಗೆ ಹೆಚ್ಚಿಸುವ ಅಗತ್ಯವಿದೆ ಎಂದು ಕೋಟಕ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್ ತಿಳಿಸಿದೆ.
ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 100 ಅಮೆರಿಕನ್ ಡಾಲರ್ ತಲುಪಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 9 ರೂಪಾಯಿಯಿಂದ 12 ರೂಪಾಯಿಗೆ ಹೆಚ್ಚಿಸಬೇಕಾಗುತ್ತದೆ. ಒಂದು ವೇಳೆ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 110ರಿಂದ 120 ಅಮೆರಿಕನ್ ಡಾಲರ್ ತಲುಪಿದರೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 15ರೂಪಾಯಿಯಿಂದ 20 ರೂಪಾಯಿಗೆ ಹೆಚ್ಚಿಸಬೇಕಾಗುತ್ತದೆ ಎಂದು CRISIL ಹೇಳಿದೆ.
ಇದನ್ನೂ ಓದಿ: ಹೊಸ ಸೋಶಿಯಲ್ ಮೀಡಿಯಾ ರೂಪಿಸುವ ಸುಳಿವು ನೀಡಿದ್ರು ಎಲಾನ್ ಮಸ್ಕ್