ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡದ ರಾಣಿಪೋಖಾರಿಯಲ್ಲಿ ಭೀಕರ ಸಾಮೂಹಿಕ ಹತ್ಯಾಕಾಂಡ ಪ್ರಕರಣ ನಡೆದಿದೆ. ವ್ಯಕ್ತಿಯೋರ್ವ ತನ್ನ ಕುಟುಂಬದ ಮೂವರು ಹೆಣ್ಣು ಮಕ್ಕಳು, ಪತ್ನಿ ಹಾಗೂ ತಾಯಿಯ ಹತ್ಯೆಗೈದಿದ್ದಾನೆ. ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಣಿಪೋಖಾರಿಯ ನಾಗಘೇರ್ ಗ್ರಾಮದಲ್ಲಿ ಘಟನೆ ನಡೆದಿದೆ.
ಪ್ರಕರಣದ ಮತ್ತಷ್ಟು ವಿವರ: ಮಹೇಶ್ ತಿವಾರಿ ಎಂಬಾತನಿಗೆ ತಾಯಿ, ಪತ್ನಿ ಹಾಗು ನಾಲ್ವರು ಮಕ್ಕಳಿದ್ದಾರೆ. ಕುಟುಂಬದೊಂದಿಗೆ ರಾಣಿಪೋಖಾರಿಯ ಶಾಂತಿನಗರದಲ್ಲಿ ವಾಸವಾಗಿದ್ದಾನೆ. ಇಂದು ಬೆಳಗ್ಗೆ ಮಹೇಶ್ ತಿವಾರಿ ಏಕಾಏಕಿ ಈ ಕೃತ್ಯವೆಸಗಿದ್ದಾನೆ. ಘಟನೆಯಲ್ಲಿ ಮಕ್ಕಳಾದ ಅನ್ನಪೂರ್ಣ(9), ಅಪರ್ಣಾ(15), ಸುವರ್ಣಾ (11) ಕೊಲೆಯಾಗಿದ್ದು, ಪತ್ನಿ ನೀತು(38) ಹಾಗೂ ತಾಯಿ ಬೀಟಲ್ ದೇವಿ(70) ಸಾವನ್ನಪ್ಪಿದ್ದಾರೆ. ಮಕ್ಕಳೆಲ್ಲರೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದು, ಓರ್ವ ಮಗಳು ಮಾತ್ರ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ನೆರೆಹೊರೆಯವರು ಮಾಹಿತಿ ನೀಡಿರುವ ಪ್ರಕಾರ, ಬಾಲಕಿ ಕಾಪಾಡಿ ಕಾಪಾಡಿ ಎಂದು ಕಿರುಚಾಡುತ್ತಿದ್ದಳು. ಅಲ್ಲಿಗೆ ನಾವು ತೆರಳಿದಾಗ ಮನೆಯ ಬಾಗಿಲು ಹಾಕಲಾಗಿತ್ತು. ಹೀಗಾಗಿ, ಒಳಹೋಗಲು ಸಾಧ್ಯವಾಗಲಿಲ್ಲ. ಕಿಟಕಿಯಿಂದ ಇಣುಕಿ ನೋಡಿದಾಗ ಮಕ್ಕಳ ಮೇಲೆ ಚಾಕುವಿನಿಂದ ಇರಿಯುತ್ತಿರುವುದು ಕಂಡು ಬಂದಿದೆ ಎಂದಿದ್ದಾರೆ. ಮನೆಯ ಮಾಲೀಕ ಮಹೇಶ್ ತಿವಾರಿ ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ. ಮನೆಗೆ ಬೀಗ ಹಾಕಿಕೊಂಡು ಒಳಗಡೆ ಪೂಜೆ ಮಾಡುತ್ತಾ ಸಮಯ ವ್ಯರ್ಥ ಮಾಡ್ತಿದ್ದರು. ತಂತ್ರ-ಮಂತ್ರದಂತಹ ಚಟುವಟಿಕೆಯಲ್ಲೂ ಅವರು ಭಾಗಿಯಾಗ್ತಿದ್ದರು. ಇಂದು ಬೆಳಗಿನ ಉಪಹಾರದ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಆರಂಭವಾಗಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಮಗಳ ಜನ್ಮದಿನದಂದೇ ನಡೀತು ದುರಂತ.. ಒಂದೇ ಕುಟುಂಬದ ಆರು ಜನರ ಶವ ಪತ್ತೆ
ಉಪಹಾರ ವಿಷಯವಾಗಿ ಜಗಳ: ಬೆಳಗ್ಗೆ ಮಕ್ಕಳೆಲ್ಲರೂ ಶಾಲೆಗೆ ಹೋಗಲು ತಯಾರಿ ನಡೆಸಿದ್ದರು. ಮಹೇಶ್ ಹಾಗೂ ಆತನ ಪತ್ನಿ ನೀತು ಬೆಳಗಿನ ಉಪಹಾರ ವಿಷಯವಾಗಿ ಜಗಳವಾಡ್ತಿದ್ದರು. ಇದು ತಾರಕ್ಕೇರಿದಾಗ ಮೊದಲು ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಬೆನ್ನಲ್ಲೇ ಹಿರಿಯ ಮಗಳು ಅಪರ್ಣಾ, ಎರಡನೇ ಮಗಳು ಸುವರ್ಣಾ ಹಾಗೂ ಅನ್ನಪೂರ್ಣಳನ್ನು ಕೊಲೆ ಮಾಡಿದ್ದಾನೆ. ಕೊನೆಯದಾಗಿ ಬಟ್ಟೆ ಮಡಚಿಡುತ್ತಿದ್ದಂತೆ ತಾಯಿ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ. ಮಹೇಶ್ ತಿವಾರಿ ಮಾನಸಿನ ಅಸ್ವಸ್ಥ ಎಂದು ಹೇಳಲಾಗ್ತಿದೆ.
ಘಟನಾ ಸ್ಥಳಕ್ಕೆ ಎಸ್ಎಸ್ಪಿ ದಲೀಪ್ ಸಿಂಗ್ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ, ಮಹೇಶ್ ತಿವಾರಿ ನಿರುದ್ಯೋಗಿಯಾಗಿದ್ದು, ಅಣ್ಣ ಉಮೇಶ್ ಅವರ ಮನೆಯಲ್ಲಿ ವಾಸವಿದ್ದರು. ಹಿರಿಯ ಸಹೋದರ ಉಮೇಶ್ ತನ್ನ ಸಹೋದರನಿಗೆ ಪ್ರತಿ ತಿಂಗಳು 15 ರಿಂದ 20 ಸಾವಿರ ರೂ. ನೀಡುತ್ತಿದ್ದರು. ಇಂದು ಬೆಳಗ್ಗೆ ಅವರು ಪೂಜೆ ಮಾಡ್ತಿದ್ದಾಗ ಅದನ್ನು ಬಿಟ್ಟು ಮಕ್ಕಳಿಗೆ ಉಪಹಾರ ತಯಾರಿಸಲು ಸಹಾಯ ಮಾಡುವಂತೆ ಪತ್ನಿ ಹೇಳಿದ್ದಾರೆ. ಹೀಗಾಗಿ, ಜಗಳ ಶುರುವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿದೆ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಬಂಧನ ಮಾಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.