ವಿಜಯವಾಡ (ಆಂಧ್ರಪ್ರದೇಶ) : ಆಂಧ್ರಪ್ರದೇಶದ ಅನಂತಪುರ, ಎನ್‌ಟಿಆರ್ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ಜನರು ವಜ್ರದ ಹುಡುಕಾಟ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಎನ್‌ಟಿಆರ್ ಜಿಲ್ಲೆಯ ಗುಡಿಮೆಟ್ಲಾ ಗ್ರಾಮದಲ್ಲೂ ವಜ್ರ ಶೋಧ ಶುರುವಾಗಿದ್ದು, ಕುಟುಂಬವೊಂದಕ್ಕೆ 60 ಲಕ್ಷ ರೂಪಾಯಿ ಮೌಲ್ಯದ ದೊಡ್ಡ ವಜ್ರದ ಹರಳು ಸಿಕ್ಕಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು, ಚಂದರ್ಲಾಪ್ಡು ಮಂಡಲದ ವ್ಯಾಪ್ತಿಯ ಗ್ರಾಮಗಳಿಗೆ ರಾಜ್ಯದ ಇತರ ಭಾಗಗಳಿಂದಲೂ ಪುರುಷರು ಮತ್ತು ಮಹಿಳೆಯರೆನ್ನದೇ ಬಂದು ವಜ್ರಕ್ಕಾಗಿ ಹುಡುಕಾಡಿದ್ದರು. ಇದೀಗ ಗುಡಿಮೆಟ್ಲಾದಲ್ಲಿ ಗುಂಟೂರು ಜಿಲ್ಲೆಯ ಸತ್ತೇನಪಲ್ಲಿ ಗ್ರಾಮದ ಕುಟುಂಬಕ್ಕೆ ಶನಿವಾರ ರಾತ್ರಿ ಆರು ಮುಖದ ವಜ್ರವೊಂದು ಸಿಕ್ಕಿದೆ.
ಕೃಷ್ಣಾ ನದಿಯ ದಡದಲ್ಲಿರುವ ಈ ಗ್ರಾಮದಲ್ಲಿ ವಜ್ರ ಸಿಕ್ಕಿದ್ದು, ಕುಟುಂಬ ಜಾಕ್‌ಪಾಟ್ ಹೊಡೆದಿದೆ ಎಂದು ತಿಳಿದುಬಂದಿದೆ. ವಜ್ರವು 50 ರಿಂದ 60 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ವಜ್ರದ ವ್ಯಾಪಾರಿಗಳು ಕುಟುಂಬವನ್ನು ಸಂಪರ್ಕಿಸಿ 40 ಲಕ್ಷ ರೂಪಾಯಿಗೆ ಖರೀದಿಸುವ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೂವರಿಗೆ ಸಿಕ್ಕಿರುವ ವಜ್ರ: ಕೃಷ್ಣಾ ನದಿಯ ದಡದ ಗ್ರಾಮಗಳಲ್ಲಿ ವಜ್ರ ಸಿಗುತ್ತಿದೆ ಎಂದು ವದಂತಿ ಹಬ್ಬಿದ ಬಳಿಕ ಈವರೆಗಿನ ಶೋಧದಲ್ಲಿ ಮೂವರು ವ್ಯಕ್ತಿಗಳಿಗೆ ಮೌಲ್ಯಯುತ ಹರಳು ಸಿಕ್ಕಿದೆ ಎಂದು ಸುದ್ದಿಯಾಗಿದೆ. ಅದಾದ ಬಳಿಕವೇ ಜನರು ವಜ್ರದ ಹುಡುಕಾಟ ಆರಂಭಿಸಿದ್ದರು.
ವಜ್ರಗಳು ಸಿಗುವ ಭರವಸೆಯೊಂದಿಗೆ ಜನರು ಜಮೀನಿನಲ್ಲಿ ಅಗೆಯುವುದು, ಕಲ್ಲುಗಳನ್ನು ತೀವ್ರ ನಿಗಾ ವಹಿಸಿ ಶೋಧಿಸುವುದು ಕಂಡುಬಂದಿತ್ತು. ಇನ್ನು ಕೆಲವರು ಜಮೀನುಗಳನ್ನೇ ಭೋಗ್ಯಕ್ಕೂ ಹಾಕಿಕೊಂಡಿದ್ದರು. ಬೆಳಗ್ಗೆಯಿಂದ ರಾತ್ರಿಯವರೆಗೂ ಹುಡುಕಾಟ ನಡೆಸಿದ್ದರು.
ಜಗತ್ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಪ್ರದೇಶಗಳು: ಆಂಧ್ರಪ್ರದೇಶ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ರಾಯಲಸೀಮೆ ಅಮೂಲ್ಯವಾದ ಹರಳುಗಳು ಮತ್ತು ವಜ್ರಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ಹೀಗಾಗಿ ಈ ಪ್ರದೇಶಗಳಲ್ಲಿ ಭೂಮಿಯಲ್ಲಿ ಹುದುಗಿರುವ ವಜ್ರಗಳು ಮಳೆಗಾಲದ ವೇಳೆ ಗೋಚರಿಸುತ್ತವೆ ಎಂದು ಜನರು ನಂಬಿದ್ದಾರೆ.
ಕೊಹಿನೂರ್ ಸೇರಿದಂತೆ ವಿಶ್ವದ ಕೆಲವು ಪ್ರಸಿದ್ಧ ವಜ್ರಗಳು ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಪತ್ತೆಯಾಗಿವೆ. ಕಳೆದ ವರ್ಷ ರೈತರೊಬ್ಬರಿಗೆ 2 ಕೋಟಿ ರೂಪಾಯಿ ಬೆಲೆಬಾಳುವ ವಜ್ರ ಸಿಕ್ಕಿತ್ತು.
ಇದನ್ನೂ ಓದಿ: Diamond found: ಪನ್ನಾ ಖಾಸಗಿ ಗಣಿಯಲ್ಲಿ 35 ಲಕ್ಷ ರೂಪಾಯಿ ಮೌಲ್ಯದ ವಜ್ರ ಪತ್ತೆ