ನವದೆಹಲಿ: ಕೈಗಾರಿಕೆಗಳ ವಿಷಯುಕ್ತ ತ್ಯಾಜ್ಯ ಸೇರುತ್ತಿರುವ ಹಿನ್ನೆಲೆಯಲ್ಲಿ ಯಮುನಾ ನದಿ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಈ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ವಿಷಕಾರಿ ನೊರೆ ಕಂಡುಬಂದಿದ್ದು, ಇದರಲ್ಲೇ ಭಕ್ತರು ಮುಳುಗೆದ್ದು ಛತ್ ಪೂಜೆಯ ಅಂಗವಾಗಿ ಪುಣ್ಯಸ್ನಾನ ಮಾಡಿದ್ದು ಕಂಡುಬಂತು.
'ಛತ್ ಪೂಜೆ' ಇಂದಿನಿಂದ ಉತ್ತರ ಭಾರತದಲ್ಲಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನದಿಗಳಲ್ಲಿ ಪುಣ್ಯಸ್ನಾನ ಮಾಡಿ ಸೂರ್ಯದೇವನಿಗೆ ವಿಶೇಷ ಪೂಜೆ ಸಲ್ಲಿಸುವುದು ಪದ್ಧತಿ. ದೆಹಲಿಯ ಕಾಲಿಂದ್ ಕುಂಜ್‌ನಲ್ಲಿರುವ ಯಮುನಾ ನದಿಯು ಅಪಾಯಕಾರಿ ಮಟ್ಟದ ಮಲಿನ ಪದಾರ್ಥಗಳೊಂದಿಗೆ ಹರಿಯುತ್ತಿದೆ. ಆದರೆ, ಅದೇ ವಿಷಯುಕ್ತ ನೀರಿನಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ಯಮುನೆಯಲ್ಲಿ ಪುಣ್ಯಸ್ನಾನ ಮಾಡುವುದು ಛತ್ ಪೂಜೆಯ ಅತ್ಯಂತ ಪ್ರಮುಖವಾದ ಭಾಗ. ಆದರೆ, ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಹಾರದ ಕಲ್ಪನಾ ಎಂಬ ಭಕ್ತೆ, 'ನಾನಿಲ್ಲಿಗೆ ಪುಣ್ಯಸ್ನಾನ ಮಾಡಲು ಬಂದಿದ್ದೇನೆ. ನೀರಿನಲ್ಲಿ ವಿಷಯುಕ್ತ ನೊರೆ ಹೆಚ್ಚಾಗಿ ತೇಲುತ್ತಿದೆ. ಈ ನೀರಿಗಿಳಿದರೆ ಹಲವು ಆರೋಗ್ಯ ಸಮಸ್ಯೆಗಳು ಬರುತ್ತವೆ. ಆದರೂ ನಾವೇನೂ ಮಾಡಲು ಆಗುವುದಿಲ್ಲ. ಬಿಹಾರದ ಘಾಟ್‌ಗಳು ತುಂಬಾ ಸ್ವಚ್ಛವಾಗಿರುತ್ತವೆ. ಆದರೆ ಇಲ್ಲಿ ತುಂಬಾ ಕಲುಷಿತವಾಗಿದೆ. ದೆಹಲಿ ಸರ್ಕಾರ ಕೂಡಲೇ ಘಾಟ್‌ಗಳನ್ನು ಸ್ವಚ್ಛಗೊಳಿಸಬೇಕು' ಎಂದು ಒತ್ತಾಯಿಸಿದರು.
ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಛತ್ ಪೂಜೆಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಪೂಜೆ ಕಾರ್ತಿಕ ಮಾಸದ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಈ ಸಲ ನವೆಂಬರ್ 8 ರಂದು 'ನಹೈ ಖಾಯಿ'ಯೊಂದಿಗೆ ಸಂಭ್ರಮಾಚರಣೆ ಪ್ರಾರಂಭವಾಗಿದ್ದು, ನವೆಂಬರ್ 11 ರಂದು ಮುಕ್ತಾಯಗೊಳ್ಳಲಿದೆ.