ಉತ್ತರಕಾಶಿ (ಉತ್ತರಾಖಂಡ): ದೇಶದೆಲ್ಲೆಡೆ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಇದರಿಂದ ಸಂಪರ್ಕ ಕಡಿತಗೊಳ್ಳುತ್ತಿದೆ, ಕಟ್ಟಡಗಳು ಕುಸಿಯುತ್ತಿವೆ, ಸಂಚಾರಕ್ಕೆ ಅಡ್ಡಿ ಹೀಗೆ ನಾನಾ ಸಮಸ್ಯೆಗಳಿಂದ ಜನರು ಪರದಾಡುತ್ತಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಉಕ್ಕಿ ಹರಿಯುವ ಭಗೀರಥಿ ನದಿಯನ್ನು ದಾಟಲು ಉತ್ತರಕಾಶಿಯ ಸಿಯುನಾ ಗ್ರಾಮಸ್ಥರು ಟ್ರಾಲಿಯನ್ನು ಅವಲಂಬಿಸಿದ್ದಾರೆ. ನದಿಯನ್ನು ದಾಟುವುದು ಬಹಳಾನೇ ಕಷ್ಟದ ಕೆಲಸವಾಗಿದೆ. ಅದರಲ್ಲೂ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ.
ನದಿ ದಂಡೆಯುದ್ದಕ್ಕೂ ಅಳವಡಿಸುವ ಮರದ ಸೇತುವೆಯು ಪ್ರತಿ ವರ್ಷವೂ ಕೊಚ್ಚಿಹೋಗುತ್ತದೆ. ಇದರಿಂದಾಗಿ ಹಗ್ಗಗಳಲ್ಲಿ ನೇತಾಡುತ್ತ ಪ್ರಯಾಣಿಸುವ ಟ್ರಾಲಿಯನ್ನು ಬೇರೆ ಯಾವುದೇ ಆಯ್ಕೆಯಿಲ್ಲದೇ ಅವಲಂಬಿಸಬೇಕಾಗುತ್ತದೆ. ಗ್ರಾಮಸ್ಥರು ಟ್ರಾಲಿಗಳನ್ನು ಬಳಸಿ ಭಗೀರಥಿ ನದಿಯನ್ನು ದಾಟುತ್ತಿದ್ದಾರೆ. ಟ್ರಾಲಿಗಳ ಬದಲಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿಯುನಾ ಗ್ರಾಮಸ್ಥರು ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
2021ರಿಂದ ತುಂಬಿ ಹರಿಯುವ ನದಿಯಲ್ಲಿ ದಾಟುವ ಮೂಲಕ ತಮ್ಮ ಜೀವವನ್ನು ಅಪಾಯದಲ್ಲಿಟ್ಟುಕೊಂಡಿದ್ದಾರೆ. ಮಳೆಗಾಲದ ದಿನಗಳಲ್ಲಿ ಭಗೀರಥಿಯ ನೀರಿನ ಮಟ್ಟವು ಗಣನೀಯವಾಗಿ ಏರಿದಾಗ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಹಾಳಾದ ಹಗ್ಗಗಳಲ್ಲಿ ನೇತಾಡುವ ಈ ಟ್ರಾಲಿಯಲ್ಲಿ ಪ್ರಯಾಣಿಸುವುದು ಶಾಲಾ ಮಕ್ಕಳು ಮತ್ತು ಗರ್ಭಿಣಿಯರಿಗೆ ಸವಾಲೇ ಸರಿ. ಆದರೆ, ಗ್ರಾಮಸ್ಥರು ಟ್ರಾಲಿಯ ಹಗ್ಗವನ್ನು ಎಳೆದು ಮತ್ತೊಂದು ಕಡೆಗೆ ತಲುಪುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎನ್ನುತ್ತಾರೆ.
ಟ್ರಾಲಿಯ ಕಂಬ ಅಳವಡಿಸಿದ ಕಡೆ ನೆಲವೂ ಕುಸಿದಿದೆ. ಸಂಚಾರಕ್ಕೆ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲೆಕ್ಟ್ರಾನಿಕ್ ರನ್ ಟ್ರಾಲಿ ಅಳವಡಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಹಗ್ಗಗಳನ್ನು ಬದಲಾಯಿಸುವಂತೆ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು ಹಾಗೂ ಆಡಳಿತ ಕಿವಿಗೊಡಲಿಲ್ಲ ಎನ್ನುವ ಆರೋಪವಿದೆ.
ಇದನ್ನೂ ಓದಿ: ಹೊಸ ಅಶೋಕ ಸ್ತಂಭದ ರೂವಾರಿ ವಾಸ್ತುಶಿಲ್ಪಿ ಲಕ್ಷ್ಮಣ್ ವ್ಯಾಸರ ಸಂದರ್ಶನ
ಇದೇ 15ರೊಳಗೆ ಎಲೆಕ್ಟ್ರಾನಿಕ್ ಟ್ರಾಲಿ ಅಳವಡಿಸುವಂತೆ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ರುಹೇಲಾ ಮಾತನಾಡಿ, ಹಾನಿಗೊಳಗಾದ ಟ್ರಾಲಿಯನ್ನು ಶೀಘ್ರ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.