ಬ್ರಹ್ಮಪುರ: ಕುಡಿತದ ಚಟಕ್ಕೆ ಬಿದ್ದಿದ್ದ ಸರ್ಕಾರಿ ಕಚೇರಿಯ ಸಹಾಯಕ ಸಿಬ್ಬಂದಿಯೊಬ್ಬ (ಪ್ಯೂನ್) ಇಡೀ ಕಚೇರಿಯ ದಾಖಲೆ ಪುಸ್ತಕಗಳು, ಪೀಠೋಪಕರಣಗಳು, ಅಲ್ಮೇರಾ ಅಲ್ಲದೇ ಅದರ ಬಾಗಿಲು, ಕಿಟಕಿಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮದ್ಯ ಕುಡಿದು ಜಲ್ಸಾ ಮಾಡಿದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.
ಒಡಿಶಾದ ಜಿಲ್ಲಾ ಶಿಕ್ಷಣ ಕಚೇರಿಯನ್ನು(ಡಿಇಒ) ಕುಡಿತಕ್ಕಾಗಿ ಗುಡಿಸಿ ಗುಂಡಾಂತರ ಮಾಡಿದ ಪ್ಯೂನ್ ಹೆಸರು ಎಂ. ಪೀತಾಂಬರ. ಸರ್ಕಾರಿ ಕಚೇರಿಯ ದಾಖಲೆಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಆತನನ್ನು ಕೆಲಸದಿಂದ ಅಮಾನತು ಮಾಡಿದ್ದಲ್ಲದೇ, ಬಂಧಿಸಿ ಜೈಲಿಗಟ್ಟಲಾಗಿದೆ.
ಯಾಕೆ ಹೀಗಾಯ್ತು?: ಶಿಕ್ಷಣ ಇಲಾಖೆ ಕಚೇರಿಯನ್ನು ಹೊಸದಾಗಿ ನಿರ್ಮಿಸಿದ ಕಟ್ಟಡಕ್ಕೆ ವರ್ಗ ಮಾಡಲಾಗಿತ್ತು. ಹಳೆಯ ದಾಖಲೆಗಳನ್ನು ಇಲ್ಲಿಂದ ತೆರವು ಮಾಡದೇ ಹಾಗೆಯೇ ಬಿಡಲಾಗಿತ್ತು. ಇದನ್ನು ಕಾಯಲು ಪ್ಯೂನ್ ಪೀತಾಂಬರನಿಗೆ ವಹಿಸಲಾಗಿತ್ತು. ದಾಖಲೆಗಳಿದ್ದ ಹಳೆಯ ಕಟ್ಟಡಕ್ಕೆ ಅಧಿಕಾರಿಗಳು ವರ್ಷಗಳಾದರೂ ಯಾರೊಬ್ಬರೂ ಭೇಟಿ ನೀಡಿರಲಿಲ್ಲ.
ಇದನ್ನೇ ಸದುಪಯೋಗ ಪಡಿಸಿಕೊಂಡ ಕುಡುಕ ಪ್ಯೂನ್, ಅಲ್ಲಿದ್ದ ಎಲ್ಲ ದಾಖಲೆ ಪುಸ್ತಕಗಳನ್ನು ಗುಜರಿ ಅಂಗಡಿಗೆ ದಿನಕ್ಕೊಂದಿಷ್ಟು ಎಂಬಂತೆ ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಕುಡಿದು ಮಜಾ ಮಾಡಿದ್ದಾನೆ. ಇಷ್ಟಕ್ಕೆ ಬಿಡದ ಆ ಕುಡುಕ ಸರ್ಕಾರಿ ಸಿಬ್ಬಂದಿ ಕಚೇರಿಯ ಎಲ್ಲ ಪೀಠೋಪಕರಣ, ಅಲ್ಮೇರಾಗಳನ್ನೂ ಮಾರಾಟ ಮಾಡಿದ್ದಾನೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ಕಚೇರಿಯ ಬಾಗಿಲು ಕಿಟಕಿಗಳನ್ನೂ ಮದ್ಯಕ್ಕಾಗಿ ಮಾರಿದ್ದಾನೆ.
ದಾಖಲೆ ಪಡೆಯಲು ಬಂದ ಅಧಿಕಾರಿಗೇ ಶಾಕ್: ಇನ್ನು ವರ್ಷಗಳ ತರುವಾಯ ಯಾವುದೇ ದಾಖಲೆ ಪಡೆಯಲೆಂದು ಹಳೆಯ ಕಟ್ಟಡಕ್ಕೆ ಬಂದ ಶಿಕ್ಷಣ ಇಲಾಖೆ ಅಧಿಕಾರಿಗೆ ಕಚೇರಿಯನ್ನು ಕಂಡು ದಿಗ್ಭ್ರಮೆಗೊಂಡಿದ್ದಾನೆ. ಅದಾಗಲೇ ಇಲ್ಲಿ ನಡೆದ ಮಹಾನ್ಕಾರ್ಯ ಬೆಳಕಿಗೆ ಬಂದಿದೆ. ಕಚೇರಿ ಸಂಪೂರ್ಣವಾಗಿ ಖಾಲಿಯಾಗಿದ್ದಲ್ಲದೇ, ಕಿಟಕಿ, ಬಾಗಿಲುಗಳೂ ಇಲ್ಲದ್ದನ್ನು ಕಂಡು ಶಾಕ್ ಆಗಿದ್ದಾರೆ. ಬಳಿಕ ಆ ಅಧಿಕಾರಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಳೆಯ ಸರ್ಕಾರ ಕಚೇರಿಯನ್ನು ಕಾಯಲು ಪ್ಯೂನ್ ಪೀತಾಂಬರ ಒಬ್ಬನೇ ಇದ್ದ ಕಾರಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತ, ಮದ್ಯಕ್ಕಾಗಿ ಇಡೀ ಕಚೇರಿಯಲ್ಲಿದ್ದ ವಸ್ತುಗಳನ್ನು ಮಾರಾಟ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಕಚೇರಿಗೆ ಎರಡು ವರ್ಷಗಳಿಂದ ಯಾವೊಬ್ಬ ಅಧಿಕಾರಿ ಭೇಟಿ ನೀಡದ ಕಾರಣ ಮದ್ಯ ಖರೀದಿಸಲು ಡೀಲರ್‌ಗಳಿಗೆ ಎರಡು ಬಾಗಿಲುಗಳು, 20 ಕ್ಕೂ ಅಧಿಕ ಅಲ್ಮೇರಾಗಳು, 10 ಕುರ್ಚಿ ಮತ್ತು ಟೇಬಲ್‌ಗಳು, ಎಲ್ಲಾ ಫೈಲ್‌ಗಳು, ಕಿಟಕಿಗಳನ್ನು ಮಾರಾಟ ಮಾಡಿರುವುದರ ಬಗ್ಗೆ ಹೇಳಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ಯೂನ್ ಪೀತಾಂಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೇ, ಸರ್ಕಾರಿ ದಾಖಲೆಗಳನ್ನು ಅನುಮತಿಯಿಲ್ಲದೇ ಖರೀದಿಸಿದ ಮೂವರು ಗುಜರಿ ಅಂಗಡಿಯವರನ್ನೂ ಪೊಲೀಸರು ಬಂಧಿಸಿದ್ದಾರೆ.
ಓದಿ: ಅಪರೂಪದ ಚಿಟ್ಟೆ ಅಟ್ಲಾಸ್ ಬಿಹಾರದಲ್ಲಿ ಪತ್ತೆ.. ವನದೇವಿಯೆಂದು ಪೂಜೆ ಮಾಡಿದ ಜನರು