ನವದೆಹಲಿ : ಅಜಾರೂಕತೆಯಿಂದ ಕಾರು ಚಾಲನೆ ಮಾಡಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕಾರಿಗೆ ಗುದ್ದಿದ ಆರೋಪದಲ್ಲಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಅವರನ್ನು ದೆಹಲಿ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಫೆಬ್ರವರಿ 22ರಂದು ದಕ್ಷಿಣ ದೆಹಲಿಯ ಮಾಳವೀಯ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಿಜಯ್ ಶೇಖರ್ ಶರ್ಮಾ ಅವರು ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಬೆನಿಟಾ ಮೇರಿ ಜೈಕರ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕಾರಿನೊಳಗೆ ಡಿಸಿಪಿ ಇರಲಿಲ್ಲ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಸುಮನ್ ನಲ್ವಾ ಪ್ರಕಾರ, ಶ್ರೀ ಅರಬಿಂದೋ ಮಾರ್ಗ್‌ನ ಮದರ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಹೊರಗೆ ಡಿಸಿಪಿ ಅವರ ಕಾರಿನ ಚಾಲಕ ಇಂಧನ ತುಂಬಲು ಬಂದಿದ್ದಾಗ ಪೇಟಿಯಂ ಸಿಇಒ ಅವರು ತಮ್ಮ ಲ್ಯಾಂಡ್ ರೋವರ್ ಕಾರಿನಿಂದ ಡಿಸಿಪಿ ಅವರ ಕಾರಿಗೆ ಗುದ್ದಿ, ಪರಾರಿಯಾಗಿದ್ದಾರೆ.
ಅಪಘಾತದಲ್ಲಿ ಯಾರೂ ಗಾಯಗೊಂಡಿರಲಿಲ್ಲ. ಆದರೆ, ಕಾರು ಡಿಸಿಪಿ ಅವರ ಕಾರು ಚಾಲಕ ದೀಪಕ್ ಕುಮಾರ್ ಅವರು ತಮ್ಮ ಕಾರಿಗೆ ಡಿಕ್ಕಿ ಹೊಡೆದ ಕಾರಿನ ಸಂಖ್ಯೆಯನ್ನು ತಕ್ಷಣವೇ ಗಮನಿಸಿ ಡಿಸಿಪಿ ಜೈಕರ್ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿ ದೂರು ದಾಖಲಿಸಲು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಕಂಟೋನ್ಮೆಂಟ್ನ ಮಿಲ್ಟ್ರಿ ಪ್ರಾಧಿಕಾರಕ್ಕೆ ನೀರು, ವಿದ್ಯುತ್ ಸ್ಥಗಿತಗೊಳಿಸುತ್ತೇವೆ : ತೆಲಂಗಾಣ ಸಚಿವ ಕೆಟಿಆರ್
ಎಫ್‌ಐಆರ್‌ನಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಮದರ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಗೇಟ್ ನಂಬರ್ 3ರ ಬಳಿ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಇದರಿಂದಾಗಿ ದೀಪಕ್ ಕುಮಾರ್ ಕಾರಿನ ವೇಗವನ್ನು ಕಡಿಮೆ ಮಾಡಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಲ್ಯಾಂಡ್ ರೋವರ್ ಕಾರು ಡಿಸಿಪಿ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಪೊಲೀಸರು ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ವಾಹನವನ್ನು ಗುರ್ತಿಸಿ, ವಿಜಯ್ ಶೇಖರ್ ಶರ್ಮಾ ಅವರನ್ನು ಬಂಧಿಸಿ, ಅದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.