ದರ್ಭಾಂಗ (ಬಿಹಾರ): 2013ರಲ್ಲಿ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಹ್ರೆ ಆಲಂ ಬಂಧಿತನಾಗಿದ್ದು, ಕಳೆದ 10 ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2014ರ ಲೋಕಸಭೆ ಚುನಾವಣೆಗೂ ಮುನ್ನ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. 2013ರ ಅಕ್ಟೋಬರ್ 27ರಂದು ಗಾಂಧಿ ಮೈದಾನದಲ್ಲಿ ಅವರು ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿದ್ದರು. ಬಹಿರಂಗ ಸಭೆಯಲ್ಲಿ ಸರಣಿ ಬಾಂಬ್ಗಳನ್ನು ಸ್ಫೋಟಿಸಿ ದುಷ್ಕೃತ್ಯ ಎಸಗಲಾಗಿತ್ತು. ಘಟನೆ ನಡೆದ ಎರಡೇ ದಿನದಲ್ಲಿ ಎಂದರೆ ಅಕ್ಟೋಬರ್ 29ರಂದು ಮುಜಾಫರ್‌ಪುರದ ಮೀರ್‌ಪುರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ಮಾಡಿ ಮೆಹ್ರೆ ಆಲಂನನ್ನು ಬಂಧಿಸಿತ್ತು.
ಆದರೆ, ಎನ್‌ಐಎ ಅಧಿಕಾರಿಗಳನ್ನೇ ತಳ್ಳಿ ಪರಾರಿಯಾಗಿದ್ದ ಈ ಆರೋಪಿ ಅಂದಿನಿಂದ ತಲೆಮರೆಸಿಕೊಂಡಿದ್ದ. ಅಕ್ಟೋಬರ್ 30ರಂದು ವಿರುದ್ಧ ಮುಜಾಫರ್‌ಪುರದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಇದೀಗ ಶನಿವಾರ ದರ್ಭಾಂಗದಲ್ಲಿರುವ ಮನೆಯಲ್ಲಿ ಮೆಹ್ರೆ ಆಲಂನನ್ನು ಸೆರೆಹಿಡಿಯಲಾಗಿದೆ. ಬಂಧಿತನನ್ನು ವಿಶೇಷ ಕಾರ್ಯಪಡೆ ಪೊಲೀಸರು ವಶಕ್ಕೆ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಅಧೀಕ್ಷಕ ಶಿವಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.
ಯಾರು ಈ ಮೆಹ್ರೆ ಆಲಂ?: ಮೆಹ್ರೆ ಆಲಂ ದರ್ಭಾಂಗಾ ಜಿಲ್ಲೆಯ ಅಶೋಕ್ ಪೇಪರ್ ಮಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಧೌಲಿ ನಿವಾಸಿ. 2013ರಲ್ಲಿ ನಡೆದ ಗಾಂಧಿ ಮೈದಾನ ಮತ್ತು ಪಾಟ್ನಾ ಜಂಕ್ಷನ್ ಬಾಂಬ್ ಸ್ಫೋಟದ ಇನ್ನೋರ್ವ ಆರೋಪಿ ಮೋನು ಎಂಬಾತನ ನಿಕಟವರ್ತಿ. ಈ ಮೋನು ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಆಗ ದರ್ಭಾಂಗಾದಲ್ಲಿ ಪಾಲಿಟೆಕ್ನಿಕ್ ಓದುತ್ತಿದ್ದ. ಇದೇ ಸಂದರ್ಭದಲ್ಲಿ ಲೈಬ್ರರಿಯೊಂದರಲ್ಲಿ ಮೆಹ್ರೆ ಆಲಂ ಮತ್ತು ಮೋನು ನಡುವೆ ಭೇಟಿಯಾಗಿತ್ತು. ನಂತರದಲ್ಲಿ ಇಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.
2013ರ ಅ.27ರಂದು ನಡೆದಿದ್ದೇನು?: ಅಂದಿನ ಗುಜರಾತ್ ಸಿಎಂ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಹುಂಕಾರ್ ರ‍್ಯಾಲಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜನಸಾಗರವೇ ನೆರೆದಿತ್ತು. ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲೂ ಹೆಚ್ಚಿನ ಜನ ಸೇರಿದ್ದರು. ಅಂದು ಬೆಳಗ್ಗೆ 9:30ರ ಸುಮಾರಿಗೆ ಪಾಟ್ನಾ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 10ರಲ್ಲಿ ಮೊದಲ ಸ್ಫೋಟ ಸಂಭವಿಸಿತ್ತು. ಇದಾದ ಸ್ವಲ್ಪ ಸಮಯದ ನಂತರ ಗಾಂಧಿ ಮೈದಾನದಲ್ಲಿ ಅನೇಕ ಸರಣಿ ಬಾಂಬ್ ಸ್ಫೋಟಗಳು ಉಂಟಾಗಿದ್ದವು. ಇದರಲ್ಲಿ ಆರು ಜನರು ಮೃತಪಟ್ಟರೆ, 87 ಜನರು ಗಾಯಗೊಂಡಿದ್ದರು.
10 ಆರೋಪಿಗಳ ಪೈಕಿ 9 ಜನರಿಗೆ ಶಿಕ್ಷೆ: ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಸರಣಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಸುದೀರ್ಘ ತನಿಖೆಯ ನಂತರ 2014ರ ಆಗಸ್ಟ್ 21ರಂದು ಎನ್‌ಐಎ 11 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. 2021ರ ನವೆಂಬರ್ ತಿಂಗಳಲ್ಲಿ ನ್ಯಾಯಾಲಯವು ಒಂಭತ್ತು ಆರೋಪಿಗಳನ್ನು ದೋಷಿ ಎಂದು ಪ್ರಕಟಿಸಿ ಶಿಕ್ಷೆ ವಿಧಿಸಿತ್ತು. ಒಂಭತ್ತು ಆರೋಪಿಗಳ ಪೈಕಿ ಹೈದರ್ ಅಲಿ, ನೋಮನ್ ಅನ್ಸಾರಿ, ಮೊಹಮ್ಮದ್ ಮುಜಿಬುಲ್ಲಾ ಅನ್ಸಾರಿ ಮತ್ತು ಇಮ್ತಿಯಾಜ್ ಆಲಂ ಎಂಬ ನಾಲ್ವರಿಗೆ ಮರಣದಂಡನೆ ಘೋಷಿಸಲಾಗಿತ್ತು. ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇಬ್ಬರು ಅಪರಾಧಿಗಳಿಗೆ ತಲಾ 10 ವರ್ಷ ಜೈಲು ಹಾಗೂ ಮತ್ತೊಬ್ಬ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆಗೆ ಪ್ರಕಟಿಸಲಾಗಿತ್ತು.
ಇದನ್ನೂ ಓದಿ: ಮೂರು ದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ: ಏನೇನು ಗೊತ್ತಾ?