ಪಾಟ್ನಾ(ಬಿಹಾರ): ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಿತ್ ಕುಮಾರ್ ಅವರ ಫ್ಲಾಟ್ ಮತ್ತು ಇತರೆ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಕೋಟಿ ರೂಪಾಯಿ ಅಕ್ರಮ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಕೇಂದ್ರದ ಕಟ್ಟಡ ನಿರ್ಮಾಣ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಆರೋಪಿಯು ಆಗಾಗ ತಮ್ಮ ಅಪಾರ್ಟ್ಮೆಂಟ್ಗೆ ಭೇಟಿ ನೀಡುತ್ತಿರುವ ವಿಡಿಯೋ ಅಧಿಕಾರಿಗಳಿಗೆ ಲಭಿಸಿತ್ತು. ಇದರ ಆಧಾರದಲ್ಲಿ ಅವರ ಬಂಧನಕ್ಕೆ ಬಲೆ ಬೀಸಲಾಗಿತ್ತು. ಸುಳ್ಳು ಗುತ್ತಿಗೆದಾರರಿಂದ 2 ಲಕ್ಷ ಲಂಚ ಸ್ವೀಕರಿಸುವ ವೇಳೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜಿತ್ ಗುತ್ತಿಗೆದಾರರಿಂದ 6 ಲಕ್ಷ ರೂಪಾಯಿ ಲಂಚ ಕೇಳಿದ್ದರು. ಆದರೆ 2 ಲಕ್ಷಕ್ಕೆ ಇತ್ಯರ್ಥಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಜಿತ್ ಬಂಧನದ ಬಳಿಕ ಫ್ಲಾಟ್ ತನಿಖೆ ನಡೆಸಿದ್ದು, ಒಂದು ಕೋಣೆಗೆ ಬೀಗ ಜಡಿಯಲಾಗಿತ್ತು. ಅನುಮಾನಗೊಂಡ ಅಧಿಕಾರಿಗಳು ಕೋಣೆ ತೆರೆದಿದ್ದು, 2 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಅಲ್ಲದೇ ಅಧಿಕಾರಿಗಳು 500 ಮತ್ತು 2000 ರೂಪಾಯಿ ಮುಖಬೆಲೆಯ ನಗದನ್ನು ಹೊಂದಿದ್ದ ಎರಡು ಬ್ಯಾಗ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಹಲವೆಡೆ ದಾಳಿ ನಡೆಸಿದ್ದು, 20 ಲಕ್ಷ ರೂಪಾಯಿ ಅಕ್ರಮ ನಗದು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.