ವಿಜಯವಾಡ: ವಿಜಯವಾಡ ಹಾಗೂ ಚೆನ್ನೈ ನಡುವೆ ಸಂಚರಿಸುವ 12711/12712 ಸಂಖ್ಯೆಯ ಪಿನಾಕಿನಿ ಎಕ್ಸ್ಪ್ರೆಸ್ 1992 ಜುಲೈ ಒಂದರಂದು ಪ್ರಾರಂಭವಾಗಿತ್ತು. ಇದೀಗ 30 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಜಯವಾಡ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ರೈಲಿನ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ರೈಲು ಚಾಲಕ ಕೇಕ್ ಕತ್ತರಿಸುವ ಮೂಲಕ ಸಿಬ್ಬಂದಿ ಸಂಭ್ರಮದಿಂದ ಕೇಕ್ ಕತ್ತರಿಸಿದರು.
ರೈಲು ಪ್ರಾರಂಭವಾದಂದಿನಿಂದ ಇಂದಿನವರೆಗೂ ಪ್ರತಿದಿನ ನೌಕರರು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ಹೀಗೆ ಹಲವಾರು ಪ್ರಯಾಣಿಕರನ್ನು ಹೊತ್ತು ಸದಾ ಬ್ಯುಸಿಯಾಗಿಯೇ ಸಾಗಿತ್ತು. ಕೃಷ್ಣ, ಗುಂಟೂರು ಮತ್ತು ಪ್ರಕಾಶಂ ಜಿಲ್ಲೆಗಳಿಂದ ನೂರಾರು ಸೀಸನಲ್ ಟಿಕೆಟ್ ಪ್ರಯಾಣಿಕರು ಈ ರೈಲಿನ ಮೂಲಕ ಹೆಚ್ಚಾಗಿ ಪ್ರಯಾಣಿಸುತ್ತಾರೆ.
ರೈಲು 3 ದಶಕಗಳನ್ನು ಪೂರೈಸಿದ ಹಿನ್ನೆಲೆ ಹೊಸದಾಗಿ WAM-4 ರೈಲು ಎಂಜಿನ್ ಅನ್ನು ಪ್ರಾರಂಭಿಸಲಾಗಿದೆ. ಈ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಎಲ್ಎಸ್ ಹಿರಿಯ ಡಿಇಇ ದಿನೇಶ್ ರೆಡ್ಡಿ, ಕೋಚಿಂಗ್ ಡಿಪೋ ಅಧಿಕಾರಿ ಉದಯ್ ಭಾಸ್ಕರ್, ನಿಲ್ದಾಣ ನಿರ್ದೇಶಕ ಪಿಬಿಎನ್ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು. ಪ್ರಯಾಣಿಕರು ಹಾಗೂ ರೈಲ್ವೆ ಸಿಬ್ಬಂದಿ ರೈಲಿನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಈ ರೈಲನ್ನು ಉತ್ತಮವಾಗಿ ನಿರ್ವಹಿಸಿದ ಕೋಚಿಂಗ್ ಮತ್ತು ಮೆಕ್ಯಾನಿಕಲ್ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಡಿಆರ್‌ಎಂ ಶಿವೇಂದ್ರ ಮೋಹನ್ ಅಭಿನಂದಿಸಿದರು.
ಇದನ್ನೂ ಓದಿ : ರಾಮಾಯಣ ಕಥಾ ಸ್ಥಳಗಳ ದರ್ಶನ: ನೇಪಾಳ ತಲುಪಿದ 'ಭಾರತ್ ಗೌರವ್' ರೈಲು