ಬಿಲಾಸ್‌ಪುರ (ಛತ್ತೀಸ್ಗಢ): ಛತ್ತೀಸ್ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಒಂದೇ ಹಳಿ ಮೇಲೆ ಮುಖಾಮುಖಿಯಾಗಿ ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ಬಂದಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಎರಡೂ ರೈಲು ಸುಮಾರು 100 ಮೀಟರ್ ದೂರದಲ್ಲೇ ನಿಂತಿವೆ. ಇದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಎದುರು ಬದುರಾಗಿರುವ ಎರಡು ರೈಲು ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಲ್ಲಿನ ಜೈರಾಮ್‌ನಗರ - ಬಿಲಾಸ್‌ಪುರ ವಿಭಾಗದಲ್ಲಿ ಈ ಘಟನೆ ನಡೆದಿದೆ. ರಾಯ್‌ಪುರದಿಂದ ಬಿಲಾಸ್‌ಪುರ ಮಾರ್ಗವಾಗಿ ಕೊರ್ಬಾಗೆ ಮೆಮು ರೈಲು ಪ್ರಯಾಣಿಸುತ್ತಿತ್ತು. ಈ ರೈಲು ಸಂಚರಿಸುತ್ತಿದ್ದ ಹಳಿಯ ಮೇಲೆಯೇ ಎದುರುಗಡೆಯಿಂದ ಗೂಡ್ಸ್ ರೈಲು ಬಂದಿದೆ. ಇದೇ ವೇಳೆ ಲೋಕೋ ಪೈಲಟ್ ಎಚ್ಚರಿಕೆಯಿಂದ ಒಂದೇ ಹಳಿಯಲ್ಲಿ 100 ಮೀಟರ್ ದೂರದಲ್ಲಿ ರೈಲುಗಳು ನಿಂತಿವೆ. ಮೆಮು ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ರೈಲಿನಿಂದ ಇಳಿದು ಕೆಳಗಡೆ ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Odisha Rail Mishap Video: ಒಡಿಶಾ ಭೀಕರ ರೈಲು ದುರಂತಕ್ಕೂ ಮುನ್ನ ಸೆರೆಯಾದ ವಿಡಿಯೋ
ಈ ವಿಡಿಯೋ ವೈರಲ್ ಆಗುತ್ತದ್ದಂತೆ ರೈಲ್ವೆ ಅಧಿಕಾರಿಗಳಿಗೂ ಇದರ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಾಟ್ಸಪ್ ಗ್ರೂಪ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಜೈರಾಮ್‌ನಗರ-ಬಿಲಾಸ್‌ಪುರ ವಿಭಾಗದದ್ದು ಎಂದು ಖಚಿತ ಪಡಿಸಿದ್ದಾರೆ. ಅಲ್ಲದೇ, ಈ ರೈಲು ವಿಭಾಗವು ಸ್ವಯಂಚಾಲಿತ ಸಿಗ್ನಲಿಂಗ್ ಬ್ಲಾಕ್ ವಿಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರೈಲ್ವೆಯ ಸಾಮಾನ್ಯ ನಿಯಮದ ಪ್ರಕಾರ, ಸ್ವಯಂಚಾಲಿತ ಸಿಗ್ನಲಿಂಗ್ ಬ್ಲಾಕ್ ವಿಭಾಗ ಇರುವಲ್ಲೆಲ್ಲಾ ಅಲ್ಲಿ ಒಂದೇ ಮಾರ್ಗದಲ್ಲಿ ಒಂದಕ್ಕಿಂತ ಹೆಚ್ಚು ರೈಲುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಒಂದೇ ಸಮಯದಲ್ಲಿ ಸಿಗ್ನಲ್ ಆಧಾರದ ಮೇಲೆ ಮಾಡಲಾಗುತ್ತದೆ. ಈ ನಿಯಮದ ಪ್ರಕಾರವೇ ಈ ರೈಲುಗಳ ಕಾರ್ಯಾಚರಣೆಯನ್ನೂ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Train Derails... ತಮಿಳುನಾಡಿನಲ್ಲಿ ಹಳಿ ತಪ್ಪಿದ ಎಲೆಕ್ಟ್ರಿಲ್ ರೈಲು.. ಬೆಚ್ಚಿಬಿದ್ದ ಪ್ರಯಾಣಿಕರು
ಜೂನ್ 2ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿತ್ತು. ಇದರಲ್ಲಿ ಸುಮಾರು 280 ಸಾವನಪ್ಪಿ, ಒಂದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದು, ಇದರ ವಿಧ್ವಂಸಕ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಆದ್ದರಿಂದ ದುರಂತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ಮತ್ತೊಂದೆಡೆ, ಇಂದು ಬೆಳಗ್ಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಇಂದು ಬೆಳಗ್ಗೆ ಉಪನಗರ ಎಲೆಕ್ಟ್ರಿಲ್ ರೈಲು ಹಳಿ ತಪ್ಪಿದ ಘಟನೆ ನಡೆದಿತ್ತು. ಇದರಿಂದ ಪ್ರಯಾಣಿಕರು ತೀವ್ರ ಭಯದಲ್ಲೇ ರೈಲಿನಿಂದ ಕೆಳಗಡೆ ಇಳಿದು ಓಡಿ ಬಂದಿದ್ದರು. ಆದರೆ, ಈ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ತಿರುವಳ್ಳೂರಿಗೆ ಸಂಚರಿಸುತ್ತಿದ್ದ ಈ ಸಂದರ್ಭದಲ್ಲಿ ಏಕಾಏಕಿ ರೈಲಿನ ಕೊನೆಯ ಬೋಗಿ ಹಳಿತಪ್ಪಿತ್ತು.
ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ದುರಂತ: ಗೂಡ್ಸ್ ರೈಲು ಹರಿದು 6 ಕಾರ್ಮಿಕರು ಸಾವು