ನವದೆಹಲಿ : ಕಳೆದ ಎರಡು ದಿನಗಳ ಹಿಂದೆ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಮೋದಿ ಸರ್ಕಾರ, ಎಲ್ಜೆಪಿ ನಾಯಕ ಪಶುಪತಿ ಕುಮಾರ್ ಪಾರಸ್ಗೂ ಕೇಂದ್ರ ಮಂತ್ರಿಯ ಸ್ಥಾನಮಾನ ನೀಡಿದೆ. ಆಹಾರ ಸಂಸ್ಕರಣಾ ಸಚಿವಾಲಯದ ಉಸ್ತುವಾರಿಯಾಗಿ ನೇಮಕಗೊಂಡಿರುವ ಪಾರಸ್ ಮಾತನಾಡಿ, ಆಹಾರ ಧಾನ್ಯಗಳನ್ನು ಹೆಚ್ಚು ಉತ್ಪಾದಿಸುವ ರಾಜ್ಯಗಳಲ್ಲಿ ಕಾರ್ಖಾನೆ ಸ್ಥಾಪಿಸಲಾಗುವುದು. ಇದರಿಂದಾಗಿ ಸ್ಥಳೀಯರು ಮತ್ತು ರೈತರು ಹೆಚ್ಚಿನ ಲಾಭ ಮತ್ತು ಉದ್ಯೋಗ ಪಡೆಯಬಹುದು ಎಂದಿದ್ದಾರೆ.
‘ಹಣ್ಣು-ತರಕಾರಿ ಸಂಸ್ಕರಣೆಗೆ ಒತ್ತು’
ಉತ್ತರ ಬಿಹಾರವು ಲಿಚಿ, ಮಾವಿನಹಣ್ಣು, ಜೋಳ ಉತ್ಪಾದನೆಗೆ ಹೆಸರುವಾಸಿಯಾಗಿರುವುದರಿಂದ ಎಲ್ಲರನ್ನು ಆಕರ್ಷಿಸಲಿದೆ. ದೇಶದಲ್ಲಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆ ಹೆಚ್ಚಿಸಲು ಒತ್ತು ನೀಡಲಾಗುವುದು. ಜತೆಗೆ ಸಂಸ್ಕರಿಸಿದ ಹಣ್ಣು-ತರಕಾರಿ ಮಾರಾಟ ಮಾಡಲು ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು ಎಂದರು.
‘ನಾನೇ ಉತ್ತರಾಧಿಕಾರಿ’
ರಾಮ್ ವಿಲಾಸ್ ಪಾಸ್ವಾನ್ ನಿಧನದ ಬಳಿಕ ಎಲ್ಜೆಪಿಯಲ್ಲಿ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೇ ಎಂದರು. ರಾಮ್ ವಿಲಾಸ್ 1969ರಲ್ಲಿ ಮೊದಲ ಬಾರಿಗೆ ಬಿಹಾರದಲ್ಲಿ ಶಾಸಕರಾದಾಗ ಮತ್ತು 1997ರಲ್ಲಿ ಸಂಸದರಾದಾಗ ತಮ್ಮ ವಿಧಾನಸಭಾ ಕ್ಷೇತ್ರವನ್ನು ನನಗೆ ಬಿಟ್ಟುಕೊಟ್ಟರು. ಅವರು ಬಿಹಾರದಲ್ಲಿ ಏಳು ಬಾರಿ ಶಾಸಕರಾಗಿ, ನಾಲ್ಕು ಬಾರಿ ಸಚಿವರಾಗಿ ಸೇವೆ ಸಲ್ಲಿಸದ್ದಾರೆ ಎಂದರು.
‘ಎಲ್ಜೆಪಿಯಿಂದ ಮಂತ್ರಿ’
ರಾಮ್ವಿಲಾಸ್ ಪಾಸ್ವಾನ್, 2019ರಲ್ಲಿ ಲೋಕಸಭಾ ಚುನಾವಣಾ ಸಮಯದಲ್ಲಿ ರಾಜ್ಯಸಭಾ ಸಂಸದರಾದರು. ಆಗ ಅವರು ಸ್ಪರ್ಧಿಸುತ್ತಿದ್ದ ಹಾಜಿಪುರ ಕ್ಷೇತ್ರದಿಂದ ನಾನು ಸ್ಪರ್ಧಿಸಿ ಗೆದ್ದು ಸಂಸತ್ಗೆ ಆಯ್ಕೆಯಾದೆ. ಇದೀಗ ಎಲ್ಜೆಪಿಯಲ್ಲಿ ನಾನು ಕ್ಯಾಬಿನೆಟ್ ಮಂತ್ರಿಯಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ತಂದೆ ಮಾಡಿರುವ ಆಸ್ತಿಗಷ್ಟೇ ಮಾಲೀಕ
ಪಾಸ್ವಾನ್ ಪುತ್ರ ಚಿರಾಗ್, ಎಲ್ಜೆಪಿ ಉತ್ತರಾಧಿಕಾರಿಯಲ್ಲ. ಅವರು ಅವರ ತಂದೆ ಮಾಡಿರುವ ಆಸ್ತಿಗಷ್ಟೇ ಮಾಲೀಕರು ಎಂದು ವ್ಯಂಗ್ಯವಾಡಿದರು.
ನಿಜವಾದ ಎಲ್ಜೆಪಿ ಯಾವುದು?
ರಾಮ್ ವಿಲಾಸ್ ಪಾಸ್ವಾಲ್ ಸ್ಥಾಪಿಸಿದ ಎಲ್ಜೆಪಿಯಲ್ಲಿ ಕೆಲವು ದಿನಗಳ ಹಿಂದೆ ಬಿರುಕು ಮೂಡಿದ್ದು, ಎರಡು ಬಣಗಳಾಗಿ ವಿಭಜನೆಗೊಂಡಿವೆ. ಪಶುಪತಿ ಕುಮಾರ್ ಪರಾಸ್ ಜತೆಗೆ ಐವರು ಸಂಸದರಿದ್ದು, ಪರಾಸ್ ಅವರನ್ನೇ ಸಂಸದೀಯ ಪಕ್ಷದ ನಾಯಕರನ್ನಾಗಿ ಘೋಷಿಸಿಕೊಂಡಿದ್ದಾರೆ. ಇತ್ತ ಚಿರಾಗ್ ಪಾಸ್ವಾನ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದು ತಾನು ಎಲ್ಜೆಪಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಈ ವಿವಾದ ಪ್ರಸ್ತುತ ಚುನಾವಣಾ ಆಯೋಗದ ಮುಂದಿದೆ.
ಇದನ್ನೂ ಓದಿ:ಮಿನಿಷ್ಟ್ರೇನು_____.. ಶೂ ಒದ್ದೆಯಾಗುತ್ತೆ ಅಂತಾ ಹೀಗೆ ಮಾಡೋದಾ.. ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ!?