ನವದೆಹಲಿ: ಮಾಹಿತಿ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಟ್ವಿಟರ್ನ ಭಾರತದ ಪ್ರತಿನಿಧಿಗಳು ಕಠಿಣ ಪ್ರಶ್ನೆಗಳನ್ನು ಎದುರಿಸಿದರು. ಕಂಪನಿಯು ಪ್ರಮುಖ ನೀತಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತದೆ ಮತ್ತು ಪ್ರಮುಖ ನೀತಿಗಳನ್ನು ರೂಪಿಸಲು ಎಷ್ಟು ಕಾರ್ಯನಿರ್ವಾಹಕ ಅಧಿಕಾರವನ್ನು ಹೊಂದಿದೆ ಎಂಬುದನ್ನು ವಿವರಿಸಲು ಸಂಸದೀಯ ಸಮಿತಿ ಟ್ವಿಟರ್ ಅಧಿಕಾರಿಗಳ ಸಭೆ ನಡೆಸಿದೆ.
ಟ್ವಿಟರ್ ಕಾನೂನಿಗೆ ಅನುಸಾರವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಂಪನಿ ಪ್ರತಿನಿಧಿ "ನಾವು ನಮ್ಮದೇ ನೀತಿಗಳನ್ನು ಅನುಸರಿಸುತ್ತೇವೆ" ಎಂದರು.
ಈ ಹಿಂದೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಲೋನಿಯಲ್ಲಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವೈರಲ್ ವಿಡಿಯೋ ಕುರಿತು ಸಾಮಾಜಿಕ ಮಾಧ್ಯಮ ದೈತ್ಯರಿಗೆ ಲೀಗಲ್ ನೋಟಿಸ್ ನೀಡಿದ್ದರು. ಸಿಆರ್‌ಪಿಸಿಯ ಸೆಕ್ಷನ್ 160 ರ ಅಡಿ ನೋಟಿಸ್ ನೀಡಲಾಗಿತ್ತು.
ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟರ್ ಸಂಸ್ಥೆಯು ಕಾನೂನು ರಕ್ಷಣೆಯನ್ನು ಕಳೆದುಕೊಂಡಿತ್ತು ಎಂದು ಈ ಹಿಂದೆ ಹೇಳಲಾಗಿತ್ತು. ಇನ್ನು ಹೊಸ ನಿಯಮಗಳ ಅನುಸಾರ ನೇಮಿಸಬೇಕಿದ್ದ ಪ್ರಮುಖ ಅಧಿಕಾರಿಗಳನ್ನು ಟ್ವಿಟರ್ ನೇಮಿಸಿರಲಿಲ್ಲ. ಹಾಗಾಗಿ, ಟ್ವಿಟರ್ ಬಳಕೆದಾರರ ಟ್ವೀಟ್‌ಗಳಲ್ಲಿ ಕಾನೂನುಬಾಹಿರ ಅಂಶಗಳಿದ್ದರೆ ಟ್ವಿಟರ್ ಸಂಸ್ಥೆಯ ವಿರುದ್ಧವೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ಮಾಡಲಾಗಿತ್ತು. ಇದೀಗ ಕೇಂದ್ರವು ಟ್ವಿಟರ್ನ ಭಾರತದ ಪ್ರತಿನಿಧಿಗಳ ಜೊತೆ ಈ ಸಂಬಂಧ ಸಭೆ ನಡೆಸಿದೆ.