ನವದೆಹಲಿ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪ್ರೊಫೈಲ್‌ಗಳನ್ನು ಲಾಕ್ ಮಾಡಿರುವುದಕ್ಕೆ ಸೂಕ್ತ ಕಾರಣ ತಿಳಿಸುವಂತೆ ಟ್ವಿಟರ್‌ಗೆ ಗಡುವು ವಿಧಿಸಲಾಗಿದೆ.
ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯು ಈ ಬಗ್ಗೆ 48 ಗಂಟೆಗಳ ಒಳಗೆ ಲಿಖಿತವಾಗಿ ಟ್ವಿಟ್ಟರ್ ಪ್ರತಿಕ್ರಿಯೆ ಕೇಳುವಂತೆ ಲೋಕಸಭಾ ಸಚಿವಾಲಯಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ನಡೆದ ಸಮಿತಿಯ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಸಮಿತಿಯು ಫೇಸ್‌ಬುಕ್ ಮತ್ತು ಗೂಗಲ್‌ನ ಪ್ರತಿನಿಧಿಗಳ ಜತೆಗೂ ಸಹ ಮಾತನಾಡಿದೆ.
ಇದನ್ನೂ ಓದಿ: IT ಸಚಿವ ರವಿಶಂಕರ್ ಪ್ರಸಾದ್ ಟ್ವಿಟರ್ ಖಾತೆ ಲಾಕ್!
ರವಿಶಂಕರ್ ಪ್ರಸಾದ್ ಅವರ ಖಾತೆಯನ್ನು ಶನಿವಾರ ತಾತ್ಕಾಲಿಕವಾಗಿ ಲಾಕ್ ಮಾಡಿದ ಟ್ವಿಟ್ಟರ್ ನಿರ್ಧಾರವನ್ನು ಉಲ್ಲೇಖಿಸಿ, ಸಮಿತಿಯ ಸದಸ್ಯರು ಫೇಸ್‌ಬುಕ್‌ಗೆ ಇದೇ ರೀತಿಯ ಕ್ರಮ ತೆಗೆದುಕೊಳ್ಳಬಹುದೇ ಎಂದು ಕೇಳಿದ್ದರು. ಇದಕ್ಕೆ ಫೇಸ್‌ಬುಕ್ ಅಂತಹ ಯಾವುದೇ ನೀತಿಯನ್ನು ಹೊಂದಿಲ್ಲ ಎಂದು ಉತ್ತರಿಸಿತ್ತು.
ಯುಎಸ್ ಹಕ್ಕುಸ್ವಾಮ್ಯ ಕಾನೂನುಗಳ ಉಲ್ಲಂಘನೆಯ ಆರೋಪದ ಮೇಲೆ ಸಚಿವ ರವಿಶಂಕರ್ ಪ್ರಸಾದ್ ಅವರ ವೈಯಕ್ತಿಕ ಖಾತೆಯನ್ನು ಟ್ವಿಟರ್ ಶನಿವಾರ ತಾತ್ಕಾಲಿಕವಾಗಿ ಲಾಕ್ ಮಾಡಿತ್ತು.
"ಡಿಎಂಸಿಎ (ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್) ನೋಟಿಸ್‌ನಿಂದಾಗಿ ಗೌರವಾನ್ವಿತ ಸಚಿವರ ಖಾತೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ನಾವು ದೃಢೀಕರಿಸಿದ್ದೇವೆ ಮತ್ತು ಉಲ್ಲೇಖಿತ ಟ್ವೀಟ್ ಅನ್ನು ತಡೆಹಿಡಿಯಲಾಗಿದೆ" ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಟ್ವಿಟರ್ ನಿರ್ಬಂಧ ಹೇರೋದ್ಯಾಕೆ : ಕೇಂದ್ರ ಸಚಿವರಿಗೆ ಉದಾಹರಣೆ ಸಹಿತ ವಿವರಿಸಿದ ಸಂಸದ ಶಶಿ ತರೂರ್!!
ತನ್ನ ಖಾತೆಗೆ ಪ್ರವೇಶ ನಿರಾಕರಿಸುವ ಮೊದಲು ಟ್ವಿಟರ್ ಪೂರ್ವ ಸೂಚನೆ ನೀಡಲು ವಿಫಲವಾದ ಕಾರಣ ರವಿಶಂಕರ್ ಪ್ರಸಾದ್ ಈ ಕ್ರಮವನ್ನು "ಅನಿಯಂತ್ರಿತ" ಮತ್ತು "ಭಾರತದ ಐಟಿ ನಿಯಮಗಳ ಸಂಪೂರ್ಣ ಉಲ್ಲಂಘನೆ" ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. ಟ್ವಿಟರ್ ನಂತರ ಅವರ ಖಾತೆಯನ್ನು ಅನ್ಲಾಕ್ ಮಾಡಿದೆ.
ಏತನ್ಮಧ್ಯೆ, ಶನಿವಾರ, ಶಶಿ ತರೂರ್ ಅವರ ಖಾತೆಯು ಎರಡು ಸಂದರ್ಭಗಳಲ್ಲಿ ಇದೇ ಕಾರಣಗಳಿಗಾಗಿ ಲಾಕ್ ಆಗಿತ್ತು.