ನವದೆಹಲಿ : ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನ ಗದ್ದಲದ ಗೂಡಾಗಿದೆ. ಕೃಷಿ ಕಾಯ್ದೆ ಚರ್ಚೆ, 12 ಸಂಸದರ ಅಮಾನತು ಸೇರಿದಂತೆ ವಿವಿಧ ಕಾರಣಕ್ಕಾಗಿ ಆಡಳಿತ-ವಿಪಕ್ಷ ನಾಯಕರ ಮಧ್ಯೆ ಮಾತಿನ ಚಕಮಕಿ ಮತ್ತು ಪ್ರತಿಭಟನೆಗಳು ಮುಂದುವರಿದಿವೆ.
ಕೊರೊನಾ ಬಗ್ಗೆ ಚರ್ಚೆ ಆರಂಭ
ಭೋಜನ ವಿರಾಮದ ಬಳಿಕ ಆರಂಭವಾದ ಸದನದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಅವರು ಕೊರೊನಾ ಬಗ್ಗೆ ಚರ್ಚೆ ಆರಂಭಿಸಿದರು.
ದೇಶದಲ್ಲಿ 3.46 ಕೋಟಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 4.6 ಲಕ್ಷ ಜನರು ಅಸುನೀಗಿದ್ದಾರೆ. ಶೇ.1.36ರಷ್ಟು ಸಾವಿನ ಸರಾಸರಿ ದಾಖಲಾಗಿದೆ. 1 ಮಿಲಿಯನ್ ಜನರಲ್ಲಿ 25 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಂಡರೆ, 340 ಜನರು ಮೃತಪಟ್ಟಿದ್ದಾರೆ ಎಂದು ಸಚಿವ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಲೋಕಸಭೆಗೆ ಮಾಹಿತಿ ನೀಡಿದರು.
ಆಕ್ಸಿಜನ್ ಉತ್ಪಾದನೆಯಲ್ಲಿ ಹೆಚ್ಚಳ
ಕೊರೊನಾ 1 ಮತ್ತು 2ನೇ ಅಲೆಯಲ್ಲಿ ಕೆಲ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಎದುರಿಸಲಾಗಿತ್ತು. ಪ್ರಸ್ತುತ 19 ರಾಜ್ಯಗಳಿಂದ ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವಾದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಪಂಜಾಬ್ನಲ್ಲಿ ಮೂವರು ಸೋಂಕಿತರು ಮಾತ್ರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವ ಮಾಂಡವೀಯ ಸದನಕ್ಕೆ ತಿಳಿಸಿದರು.
ಇದನ್ನೂ ಓದಿ: ಸಂಸದರ ಅಮಾನತು ವಿಚಾರ : ವಿಪಕ್ಷಗಳ ವಿರುದ್ಧ ಬಿಜೆಪಿ ಸಂಸದರ ಪ್ರತಿಭಟನೆ
ಮಹಾರಾಷ್ಟ್ರ ಸಂಸದರೊಬ್ಬರು ಆಕ್ಸಿಜನ್ ಉತ್ಪಾದನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ ಇದೀಗ ಒಮಿಕ್ರಾನ್ ಭೀತಿಯ ಮಧ್ಯೆಯೂ ಪ್ರಸ್ತುತ 4500 ಎಂಟಿಯಷ್ಟು ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ.
ಈ ಹಿಂದೆ 1400 ಎಂಟಿಯಷ್ಟು ಆಕ್ಸಿಜನ್ ಉತ್ಪಾದನೆ ಮಾಡಲಾತ್ತಿತ್ತು. ಇದೀಗ 4500 ಎಂಟಿಗೆ ಏರಿಸಲಾಗಿದೆ. ದೇಶದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ತಿಳಿಸಿದರು.