ನವದೆಹಲಿ: ಕಲಾಪ ನಡೆಯುತ್ತಿದ್ದಂತೆ ಸಂಸತ್ ಭವನದೊಳಗೆ ನುಗ್ಗಿ ಭದ್ರತಾ ಲೋಪ ಎಸಗಿದ ಆರೋಪಿಗಳ ವಿರುದ್ಧದ ಪ್ರಕರಣದ ಪೊಲೀಸ್ ತನಿಖೆ ಚುರುಕುಗೊಂಡಿದೆ. ಆರೋಪಿಗಳು ಸಾಕ್ಷ್ಯ ಸಿಗಬಾರದು ಎಂದು ತಮ್ಮ ಮೊಬೈಲ್ಗಳನ್ನು ಮುರಿದು, ಸುಟ್ಟುಹಾಕಿದ್ದರು. ಇದರ ತುಣುಕುಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಸಾಕ್ಷ್ಯನಾಶ ಆರೋಪದಡಿ ಪ್ರಕರಣ ಬಿಗಿಗೊಳಿಸಿದ್ದಾರೆ.
ರಾಜಸ್ಥಾನದ ನಾಗೌರ್ ಎಂಬಲ್ಲಿ ಮೊಬೈಲ್ಗಳನ್ನು ಸುಟ್ಟು ಹಾಕಲಾಗಿದೆ. ಕೆಲವು ಮುರಿದ ಮತ್ತು ಸುಟ್ಟುಹೋದ ತುಣುಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಲಲಿತ್ ಝಾ ಈ ಕೃತ್ಯ ಎಸಗಿದ್ದ. ಆರೋಪಿಗಳ ವಿರುದ್ಧ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಲಿತ್ ಝಾ ನೀಡಿದ ಮಾಹಿತಿಯ ಆಧಾರದ ಮೇಲೆ ಮೊಬೈಲ್ ತುಣುಕುಗಳನ್ನು ವಶಕ್ಕೆ ಪಡೆಯಲಾಗಿದೆ. ಲಲಿತ್ ಝಾ ರಾಜಸ್ಥಾನದಲ್ಲಿ ತಲೆಮರೆಸಿಕೊಳ್ಳಲು ಇನ್ನೊಬ್ಬ ಆರೋಪಿ ಮಹೇಶ್ ಕುಮಾವತ್ ನೆರವಾಗಿದ್ದ. ಈತನ ನೆರವು ಪಡೆದು ಲಲಿತ್ ಮೊಬೈಲ್ಗಳನ್ನು ಸುಟ್ಟು ಹಾಕಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಪುರಾವೆಗಳನ್ನು ನಾಶ ಮಾಡಲು ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಉದ್ದೇಶಪೂರ್ವಕವಾಗಿ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ. ಹೀಗಾಗಿ 6 ಆರೋಪಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ, ಸೆಕ್ಷನ್ 201 (ಸಾಕ್ಷ್ಯ ನಾಶ/ಸಾಕ್ಷ್ಯಗಳ ಕಣ್ಮರೆ) ಸೇರಿದಂತೆ ಕಠಿಣ ಐಪಿಸಿ ಸೆಕ್ಷನ್‌ಗಳನ್ನು ಸೇರಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. ಇದರ ಜೊತೆಗೆ ಯುಎಪಿಎ ಕಾಯ್ದೆಯಡಿ ಭಯೋತ್ಪಾದನೆ ಆರೋಪಗಳನ್ನೂ ಹೊರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
6 ಆರೋಪಿಗಳ ಬಂಧನ, ವಿಚಾರಣೆ: ದೆಹಲಿ ಪೊಲೀಸರು ಈಗಾಗಲೇ ಸಾಗರ್ ಶರ್ಮಾ, ಮನೋರಂಜನ್, ಅಮೋಲ್ ಶಿಂಧೆ, ನೀಲಂ ದೇವಿ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಎಂಬ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸಾಗರ್ ಶರ್ಮಾ ಮತ್ತು ಮನೋರಂಜನ್ ಕಲಾಪದ ಶೂನ್ಯ ವೇಳೆಯಲ್ಲಿ ಸಾರ್ವಜನಿಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಆತಂಕ ಸೃಷ್ಟಿಸಿದ್ದರು. ಬಳಿಕ ತಮ್ಮಲ್ಲಿದ್ದ ಹಳದಿ ಹೊಗೆ ಸೂಸುವ ಸ್ಮೋಕ್ ಬಾಂಬ್ಗಳನ್ನು ಎಸೆದಿದ್ದರು. ಅದೇ ಸಮಯದಲ್ಲಿ ಇನ್ನಿಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಸಂಸತ್ತಿನ ಆವರಣದ ಹೊರಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸ್ಮೋಕ್ ಬಾಂಬ್ ಬಳಸಿದ್ದರು.
ಸಂಸತ್ ಗೇಟ್‌ನ ಹೊರಗಿದ್ದ ಲಲಿತ್ ಝಾ ತನ್ನ ಮೊಬೈಲ್‌ನಲ್ಲಿ ಕೃತ್ಯವನ್ನು ಸೆರೆ ಹಿಡಿದಿದ್ದ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ, ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡ ನಂತರ ರಾಜಸ್ಥಾನದ ನಾಗೌರ್ಗೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ಜೊತೆಗೆ ಇತರ ಆರೋಪಿಗಳಾದ ಮಹೇಶ್ ಕುಮಾವತ್ ಮತ್ತು ಕೈಲಾಶ್ ಕೂಡ ಇದ್ದರು. ಇದಾದ ಬಳಿಕ ಲಲಿತ್ ಝಾ ಪೊಲೀಸರಿಗೆ ಶರಣಾಗಿದ್ದಾನೆ. ಮಹೇಶ್ ಕುಮಾವತ್ನನ್ನು ಪೊಲೀಸರು ಶನಿವಾರ ಬಂಧಿಸಿದ್ದರು.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಕೇಸ್: ಆರನೇ ಆರೋಪಿ ಬಂಧನ, 7 ದಿನ ಪೊಲೀಸ್ ಕಸ್ಟಡಿಗೆ