ಜೈಪುರ: ಇಬ್ಬರು ಮಕ್ಕಳನ್ನು ಸರಪಳಿಯಿಂದ ಕಟ್ಟಿಹಾಕಿ ಪೋಷಕರು ಬೀಗ ಹಾಕಿರುವ ಭೀಕರ ಘಟನೆ ನಡೆದಿದೆ. ಜಿಲ್ಲೆಯ ಮುರಳಿಪುರದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ತಲೆಕೆಳಗಾಗಿ ಕಟ್ಟಿ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಪೋಷಕರ ಈ ಅಮಾನವೀಯ ಕೃತ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮಕ್ಕಳ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಮಕ್ಕಳ ಹೇಳಿಕೆ ಆಧರಿಸಿ ನೆರೆಯ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಮಕ್ಕಳ ಆಯೋಗ ಸಿದ್ಧತೆ ನಡೆಸಿದೆ.
ಮಕ್ಕಳ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಭೇಟಿ:
ದಂಪತಿಗಳು ತಮ್ಮ 6 ಮತ್ತು 8 ವರ್ಷದ ಇಬ್ಬರು ಮಕ್ಕಳನ್ನು ತಲೆಕೆಳಗಾಗಿ ನೇತುಹಾಕಿ, ಸರಪಳಿಯಿಂದ ಕಟ್ಟಿಹಾಕಿದ್ದು, ಮನೆಗೆ ಹೊರಗಿನಿಂದ ಬೀಗ ಹಾಕಿದ್ದಾರೆ. ಅಕ್ಕಪಕ್ಕದ ಮನೆಯವರು ಎನ್ಜಿಒ ಸಹಾಯದಿಂದ ಮಕ್ಕಳ ರಕ್ಷಣೆ ಮಾಡಿದ್ದರು. ಬಳಿಕ ಮಕ್ಕಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಘಟನೆಯ ಗಂಭೀರತೆ ಅರಿತ ಮಕ್ಕಳ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಮಂಗಳವಾರ ಬೆಳಗ್ಗೆ ಮುರಳಿಪುರದ ಮಕ್ಕಳ ಮನೆಗೆ ಆಗಮಿಸಿದರು. ಬೇನಿವಾಲ್ ಅವರು ಮಕ್ಕಳನ್ನು ಭೇಟಿಯಾಗಿ ವಿಷಯದ ಬಗ್ಗೆ ವಿಚಾರಿಸಿದರು ಮತ್ತು ಮಕ್ಕಳ ಪೋಷಕರಿಗೆ ಸಲಹೆ ನೀಡಿದರು.
ಕೌನ್ಸೆಲಿಂಗ್‌ನಲ್ಲಿ ಒಪ್ಪಿಕೊಂಡ ತಾಯಿ:
ಮಕ್ಕಳ ಚೇಷ್ಟೆ ತಾಳಲಾರದೇ ಅವರನ್ನು ಹೀಗೆ ಕಟ್ಟಿ ಹಾಕಿರುವುದಾಗಿ ಕೌನ್ಸೆಲಿಂಗ್‌ನಲ್ಲಿ ತಾಯಿ ಒಪ್ಪಿಕೊಂಡಿದ್ದಾರೆ ಎಂದು ಸಂಗೀತಾ ಬೇನಿವಾಲ್ ತಿಳಿಸಿದ್ದಾರೆ. ಮಹಿಳೆ ತನ್ನ ಪತಿಗೆ ಊಟ ನೀಡಲು ಹೋದಾಗ ಇಬ್ಬರು ಮಕ್ಕಳನ್ನು ಹಗ್ಗದಿಂದ ಕಟ್ಟಿ ಹಾಕಿ ಮಕ್ಕಳು ಎಲ್ಲೂ ಹೊರಗೆ ಬರದಂತೆ ಹೊರಗಿನಿಂದ ಮನೆಗೆ ಬೀಗ ಹಾಕಿದ್ದಾರೆ.
ಅಮ್ಮ ನಮ್ಮನ್ನು ತಲೆಕೆಳಗಾಗಿ ನೇತು ಹಾಕಿರಲಿಲ್ಲ:
ಈ ಬಗ್ಗೆ ಮಾತನಾಡಿದ ಸಂಗೀತಾ ಬೇನಿವಾಲ್, ಮಕ್ಕಳನ್ನು ವಿಚಾರಿಸಿದಾಗ ತಾಯಿ ಮನೆಯಿಂದ ಹೊರಗೆ ಹೋಗುವಾಗ ಕಟ್ಟಿ ಹಾಕಿದ್ದಾಳೆ ಎಂದು ಹೇಳಿದ್ದಾರೆ. ಆದರೆ ತಾಯಿ ಹೊರಟುಹೋದ ನಂತರ, ಪಕ್ಕದಲ್ಲಿ ವಾಸಿಸುವ ಬೂಟು ಧರಿಸಿರುವ ಅಂಕಲ್ ಬಂದು ಅವರನ್ನು ತಲೆಕೆಳಗಾಗಿ ನೇತುಹಾಕಿದ ಫೋಟೋಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.
ಅಲ್ಲದೇ ಸುತ್ತಮುತ್ತಲಿನ ನೆರೆಹೊರೆಯವರನ್ನೂ ಒಟ್ಟುಗೂಡಿಸಿದರು. ಅಮ್ಮ ನಮ್ಮನ್ನು ತಲೆಕೆಳಗಾಗಿ ನೇತು ಹಾಕಿರಲಿಲ್ಲ. ಆದರೆ, ಸರಪಳಿಯಿಂದ ಕಟ್ಟಿದ್ದರಷ್ಟೆ ಅಂತ ಮಕ್ಕಳು ತಿಳಿಸಿರುವುದಾಗಿ ಹೇಳಿದರು.
ಮಕ್ಕಳು ಕಳೆದು ಹೋಗಬಾರದೆಂದು ಕಟ್ಟಿಹಾಕಿದ ಅಮ್ಮ:
ಪೋಷಕರಿಬ್ಬರೂ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ ಎಂಬ ಅಂಶ ಕೌನ್ಸೆಲಿಂಗ್‌ನಲ್ಲಿ ಬೆಳಕಿಗೆ ಬಂದಿದೆ. ಅವರಿಗೆ 6 ಮತ್ತು 8 ವರ್ಷದ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಕ್ಕಳಿದ್ದಾರೆ. ಈ ಇಬ್ಬರೂ ಮಕ್ಕಳು ತಮಾಷೆ ಮತ್ತು ಚೇಷ್ಟೆಯುಳ್ಳವರು. ಕಳೆದ ವಾರವಷ್ಟೇ ಮಕ್ಕಳು ಮನೆಯಿಂದ ಹೊರಗೆ ಆಟವಾಡುತ್ತಾ ನಾಪತ್ತೆಯಾಗಿದ್ದರು. ಈ ಬಗ್ಗೆ ಮುರಳಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ಹೊತ್ತಿಗೆ ಮತ್ತೆ ಮಕ್ಕಳು ಕಳೆದು ಹೋಗಬಾರದು ಅಂತ ಅಪ್ಪನಿಗೆ ಊಟ ಕೊಡಲು ಹೋದಾಗ ಅಮ್ಮ ಮಕ್ಕಳನ್ನು ಕಟ್ಟಿ ಹಾಕಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ತಾಯಿಗೆ ಮಕ್ಕಳ ಆಯೋಗದ ಸಲಹೆ:
ಮಗುವನ್ನು ಕಟ್ಟಿ ಹಾಕಿರುವುದನ್ನು ತಾಯಿ ಒಪ್ಪಿಕೊಂಡಿದ್ದಾರೆ ಎಂದು ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ತಿಳಿಸಿದರು. ಹಾಗಾಗಿಯೇ ಮಕ್ಕಳನ್ನು ಈ ರೀತಿ ಹಗ್ಗದಿಂದ ಕಟ್ಟಿ ಹಾಕದಂತೆ ಕಮಿಷನ್ ತಡೆ ನೀಡಿದೆ. ನೀವು ಮನೆಯಿಂದ ಹೊರಗೆ ಹೋದರೆ, ಮಕ್ಕಳನ್ನು ಪಕ್ಕದವರ ಸ್ಥಳದಲ್ಲಿ ಬಿಡಿ ಎಂದು ತಿಳಿಸಿರುವುದಾಗಿ ಅವರು ಹೇಳಿದರು.
ಅಪಪ್ರಚಾರ ಮಾಡಲು ಯತ್ನಿಸಿದ್ದರೆ ಕಾನೂನು ಕ್ರಮ:
ಪಾಲಕರು ಮಕ್ಕಳನ್ನು ಈ ರೀತಿ ಕಟ್ಟಿ ಹಾಕಲು ಸಾಧ್ಯವಿಲ್ಲ ನಿಜ. ಆದರೆ, ಮಕ್ಕಳ ತಲೆ ಕೆಳಗಾದ ಫೊಟೋ ತೆಗೆದಿರುವುದು ಹೆಚ್ಚು ಅಪಾಯಕಾರಿ. ಆದ್ದರಿಂದ ಈ ಸಂಪೂರ್ಣ ಪ್ರಕರಣದ ತನಿಖೆ ನಡೆಸುವಂತೆ ಸಿಡಬ್ಲ್ಯುಸಿಗೆ ಸೂಚನೆ ನೀಡಲಾಗಿದೆ. ಯಾರಾದರೂ ಮಕ್ಕಳನ್ನು ಈ ರೀತಿ ತಲೆಕೆಳಗಾಗಿ ನೇತು ಹಾಕಿ ಛಾಯಾಚಿತ್ರ ತೆಗೆದು ಅಪಪ್ರಚಾರ ಮಾಡಲು ಯತ್ನಿಸಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
ಓದಿ: ಅಬ್ಬಬ್ಬಾ.... ಈ ಮೀನುಗಳಿಗೆ ಬರೋಬ್ಬರಿ 1 ಕೋಟಿ.. ಏನಿರಬೇಕು ಈ ಫಿಶ್ಗಳ ವಿಶೇಷತೆ ಅಂತೀರಾ?