ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಕೇಳಿ ಬಂದಿರುವ 100 ಕೋಟಿ ರೂ. ಲಂಚ ಪ್ರಕರಣದ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ.
ಸಚಿನ್ ವಾಜೆ ಪ್ರಕರಣದ ಹಿನ್ನೆಲೆ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಮ್ಬೀರ್ ಸಿಂಗ್ ಅವರನ್ನು ಮಹಾ ಸರ್ಕಾರ ವರ್ಗಾವಣೆ ಮಾಡಿತ್ತು. ಇದ್ದಕ್ಕಿದ್ದಂತೆ ಪರಮ್ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿದ್ದರಿಂದ, ಸಚಿನ್ ವಾಜೆಗೆ ತಿಂಗಳಿಗೆ 100 ಕೋಟಿ ವಸೂಲು ಮಾಡಿ ನೀಡುವಂತೆ ಗೃಹ ಸಚಿವರು ಟಾರ್ಗೆಟ್ ಫಿಕ್ಸ್ ಮಾಡಿದ್ದರು ಎಂಬ ಆರೋಪ ಮಾಡಿದ್ದರು. ಪರಮಬೀರ್ ಸಿಂಗ್ ಅವರ ಆರೋಪದ ಹಿನ್ನೆಲೆಯಲ್ಲಿ ಮುಂಬೈ ಹೈಕೋರ್ಟ್ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ವಿಚಾರಣೆ ತೀವ್ರಗೊಳಿಸಿದ್ದು, ಇಂದು ಆರೋಪ ಮಾಡಿದ ಮಾಜಿ ಮುಂಬೈ ಪೊಲೀಸ್ ಆಯುಕ್ತರನ್ನ ವಿಚಾರಣೆಗೆ ಒಳಪಡಿಸಿ ಅವರ ಹೇಳಿಕೆಯನ್ನ ದಾಖಲು ಮಾಡಿಕೊಂಡಿದೆ.
ಓದಿ : ಆರೋಪಗಳು ಬಲವಾಗಿವೆ: ಮಹಾ ಸರ್ಕಾರ, ದೇಶಮುಖ್ ಅರ್ಜಿ ವಜಾ ಮಾಡಿದ ಸುಪ್ರೀಂ
ಇದೇ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಶ್ರೀ ಪಟೇಲ್, ಸಚಿನ್ ವಾಜೆ ಹಾಗೂ ಸಂಜಯ್ ಪಾಟೀಲ್ ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡಿದೆ. ಈ ನಡುವೆ ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ವಜಾ ಮಾಡಲು ನಿರಾಕರಿಸಿದ್ದು, ತನಿಖೆಗೆ ತಡೆ ನೀಡಲೂ ಸಹ ನಿರಾಕರಿಸಿದೆ.