ಮುಂಬೈ (ಮಹಾರಾಷ್ಟ್ರ): ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಅವರದ್ದು ಎನ್ನಲಾಗುತ್ತಿರುವ ಪತ್ರ ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ಪತ್ರ ಅಧಿಕೃತ ಮೇಲ್ ಐಡಿಯಿಂದ ಬಂದಿಲ್ಲ, ಇದರಲ್ಲಿ ಸಹಿಯೂ ಇರಲಿಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಚೇರಿ ಸ್ಪಷ್ಟನೆ ನೀಡಿದೆ.
ಪರಮ್ಬೀರ್ ಸಿಂಗ್ ಪತ್ರ ನಿನ್ನೆ ಸಂಜೆ ಅವರ ಅಧಿಕೃತ ಮೇಲ್ ವಿಳಾಸದ ಬದಲಾಗಿ ಬೇರೆ ವಿಳಾಸದಿಂದ ಬಂದಿದೆ. ಅಲ್ಲದೇ ಈ ಪತ್ರದಲ್ಲಿ ಪರಮ್ಬೀರ್ ಸಿಂಗ್ ಅವರ ಸಹಿಯೂ ಇರಲಿಲ್ಲ. ಹೊಸ ಇ-ಮೇಲ್ ವಿಳಾಸವನ್ನು ಪರಿಶೀಲಿಸಬೇಕಿದೆ. ಮಹಾರಾಷ್ಟ್ರ ಗೃಹ ಸಚಿವಾಲಯ ಈ ಬಗ್ಗೆ ಪರಮ್ಬೀರ್ ಸಿಂಗ್ರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಕಚೇರಿ ತಿಳಿಸಿದೆ.
ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹ ಮಾಡುವಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ವಾಜೆ ಮೇಲೆ ಅನಿಲ್ ದೇಶಮುಖ್ ಒತ್ತಡ: ಪರಮ್ ಬೀರ್ ಸಿಂಗ್
ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂಬೈ ನಗರ ಪೊಲೀಸ್ ಆಯುಕ್ತರಾಗಿದ್ದ ಪರಮ್ಬೀರ್ ಸಿಂಗ್ ಅವರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ಗುರುವಾರವಷ್ಟೇ ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ತಿಂಗಳಿಗೆ 100 ಕೋಟಿ ರೂ. ಲಂಚ ಸಂಗ್ರಹಿಸಿ ಕೊಡುವಂತೆ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಆದೇಶವಿತ್ತು ಎಂದು ಸಿಎಂ ಠಾಕ್ರೆಗೆ ಸಿಂಗ್ ಪತ್ರ ಬರೆದಿದ್ದರು.