ಪಾಟ್ನಾ: ಮಾಜಿ ಸಂಸದ ಮತ್ತು ಜನ ಅಧಿಕಾರ ಪಕ್ಷದ (ಜೆಎಪಿ) ಅಧ್ಯಕ್ಷ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಬಿಹಾರದ ಸುಪಾಲ್ ಜಿಲ್ಲೆಯ ವೀರ್ಪುರ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ಪಾಟ್ನಾದಲ್ಲಿ ಲಾಕ್ಡೌನ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದವ್ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಇದಾದ ಬಳಿಕ 30 ವರ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧೆಪುರ ಪೊಲೀಸರು ತನ್ನನ್ನು ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯಾದವ್ " ಕೊರೊನಾ ರೋಗಿಗಳಿಗೆ ಸಹಾಯ ಮಾಡುವುದು, ಅವರ ಜೀವ ಉಳಿಸುವುದು ಮತ್ತು ಔಷಧ, ಆ್ಯಂಬುಲೆನ್ಸ್, ಆಮ್ಲಜನಕ ಒದಗಿಸುವುದು ಮತ್ತು ಆಸ್ಪತ್ರೆ ಮಾಫಿಯಾಗಳನ್ನು ಬಹಿರಂಗಪಡಿಸುವುದು ಅಪರಾಧವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಹೋರಾಟ ಮುಂದುವರಿಯುತ್ತದೆ." ಎಂದು ಬರೆದಿದ್ದಾರೆ.
"ನಾನು ವೀರ್ಪುರ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ನಾನಿರುವ ಸೆಲ್ನಲ್ಲಿ ನೀರು ಇಲ್ಲ, ವಾಶ್ ರೂಮ್ ಇಲ್ಲ, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ, ಹಾಗಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ." ಎಂದು ಹೇಳಿದ್ದಾರೆ.
ಮಂಗಳವಾರ ಯಾದವ್ ಅವರು ಬಿಜೆಪಿಯ ಒತ್ತಡದ ಹಿನ್ನೆಲೆ ಸಿಎಂ ನಿತೀಶ್ ಕುಮಾರ್ ನನ್ನನ್ನು ಬಂಧಿಸಲು ಆದೇಶಿಸಿದ್ದಾರೆ ಎಂದು ಹೇಳಿಕೊಂಡಿದ್ದರು. "ನಾನು ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಕೊರೊನಾ ರೋಗಿಗಳ ಸೇವೆ ಮಾಡುತ್ತಿದ್ದೇನೆ. 30 ವರ್ಷಗಳ ಹಳೆಯ ಪ್ರಕರಣವೊಂದರಲ್ಲಿ ಮಾಧೆಪುರ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಆ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಇದೆ. ಈಗ ನನ್ನನ್ನು ಬಂಧಿಸಲು ಅಗತ್ಯವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನಾನು ನಿತೀಶ್ ಕುಮಾರ್ ಅವರನ್ನು ಕೇಳುತ್ತಿದ್ದೇನೆ. ಇದು ನನ್ನ ವಿರುದ್ಧ ನಡೆಸಿರುವ ದೊಡ್ಡ ಪಿತೂರಿ. ನನಗೆ ಕೊರೊನಾ ನೆಗೆಟಿವ್ ಬಂದಿದೆ. ಮತ್ತು ಜೈಲಿನಲ್ಲಿ ನನಗೆ ಏನಾದರೂ ಸಂಭವಿಸಿದಲ್ಲಿ, ನಿತೀಶ್ ಕುಮಾರ್ ಅವರೇ ಹೊಣೆಗಾರರಾಗಬೇಕು ಎಂದು ಯಾದವ್ ಹೇಳಿದ್ದಾರೆ.