ಪನ್ನಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಪನ್ನಾ ನಾಡು ವಿಶ್ವದಲ್ಲೇ ಅಮೂಲ್ಯ ವಜ್ರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಭೂಮಿಗೆ ಬಡವನನ್ನು ರಾಜನನ್ನಾಗಿ ಮಾಡುವಂತಹ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಸುನೀಲ್ ಕುಮಾರ್ ಮತ್ತು ಅವರ ಇತರ ಒಂಬತ್ತು ಜನ ಸಹಚರರು ಒಂದೇ ರಾತ್ರಿಯಲ್ಲಿ ಲಕ್ಷಾಧಿಪತಿಗಳಾಗಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಸುನೀಲ್ ಕುಮಾರ್ ಹಾಗೂ ಅವರ 9 ಮಂದಿ ಸಹಚರರೊಂದಿಗೆ ಜರೂಪುರ್ ಖಾಸಗಿ ವಲಯದಲ್ಲಿ ವಜ್ರದ ಗಣಿ ಸ್ಥಾಪಿಸಿದ್ದರು.
ಇಂದು ಹೊಳೆಯುವ 7.90 ಕ್ಯಾರೆಟ್ ಗುಣಮಟ್ಟದ ವಜ್ರ ಅವರಿಗೆ ಲಭಿಸಿದೆ. ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದ್ದಾರೆ. ಮುಂಬರುವ ವಜ್ರದ ಹರಾಜಿನಲ್ಲಿ ಇದನ್ನು ಇಡಲಾಗುತ್ತದೆ. ಈ ವಜ್ರದ ಬೆಲೆ ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ವಜ್ರ ಕಚೇರಿಯ ಅಧಿಕಾರಿಯ ಪ್ರಕಾರ, "ಈ ವಜ್ರವನ್ನು ಹರಾಜಿನಲ್ಲಿ ಬಿಡ್ ಮಾಡಲಾಗುತ್ತದೆ. ನಂತರ, ತೆರಿಗೆಯನ್ನು ಕಡಿತಗೊಳಿಸಿದ ನಂತರ, ರೈತ ಮತ್ತು ಅವರ ಸಹಚರರಿಗೆ ಹಣವನ್ನು ಪಾವತಿಸಲಾಗುತ್ತದೆ'' ಎಂದು ಅವರು ತಿಳಿಸಿದರು. "ಇದು ನಮ್ಮೆಲ್ಲರ ಸಹೋದ್ಯೋಗಿಗಳ ಶ್ರಮ ಎಂದು ಹೇಳಿದ ರೈತ, ಆದರಿಂದ ಬಂದ ಹಣವನ್ನು ಎಲ್ಲ ಸಹೋದ್ಯೋಗಿಗಳಿಗೆ ಸಮಾನವಾಗಿ ಹಂಚಲಾಗುತ್ತದೆ. ಇದು ಈ ವರ್ಷದ ಮೊದಲ ದೊಡ್ಡ ವಜ್ರವಾಗಿದೆ'' ಎಂದು ಸುನೀಲ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ಈ ಹಿಂದೆ 3.21 ಕ್ಯಾರೆಟ್ ವಜ್ರ ಪತ್ತೆ: ಏಳು ರೈತರಿಗೆ ಅದೃಷ್ಟ ಖುಲಾಯಿಸಿತ್ತು: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಬ್ರಿಜ್‌ಪುರ ಮೂಲದ ರೈತರಿಗೆ ಈ ಹಿಂದೆಯೂ ಅದೃಷ್ಟ ಖುಲಾಯಿಸಿತ್ತು. ಸರ್ಕಾರದಿಂದ ಬಾಡಿಗೆ ಮೇಲೆ ಪಡೆದ ಲಾಲ್ಕಿಧೇರಿ ಪ್ರದೇಶದ ವಜ್ರದ ಗಣಿಯಲ್ಲಿ 3.21 ಕ್ಯಾರೆಟ್ ವಜ್ರ ಲಭಿಸಿತ್ತು. ಇದನ್ನು ಪನ್ನಾದಲ್ಲಿರುವ ಸರ್ಕಾರಿ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ್ದ ರೈತ ರಾಜೇಂದ್ರ ಗುಪ್ತಾ ಅವರು, ''ಈ ವಜ್ರದಿಂದ ಪಡೆದುಕೊಳ್ಳುವ ಹಣವನ್ನು ಗಣಿಗಾರಿಕೆಯಲ್ಲಿ ತೊಡಗಿದ್ದ ಏಳು ಮಂದಿ ರೈತರು ಸಮಾನವಾಗಿ ಹಂಚಿಕೆ ಮಾಡಿಕೊಳ್ಳುತ್ತೇವೆ. ವಜ್ರ ದೊರೆತಿರುವುದು ನಮ್ಮ ಅದೃಷ್ಟ. ಇದರಿಂದ ಬರುವ ಹಣದಲ್ಲಿ ಉದ್ಯಮ ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ರೈತ ತಿಳಿಸಿದ್ದನು. ರತ್ನಶಾಸ್ತ್ರಜ್ಞರು ನೀಡಿದ್ದ ಮಾಹಿತಿ ಪ್ರಕಾರ, ಉತ್ಖನನದ ವೇಳೆ ದೊರೆತ ಈ ವಜ್ರವು ಉತ್ಕೃಷ್ಟ ದರ್ಜೆಯಿಂದ ಕೂಡಿದೆ. ಹೆಚ್ಚಿನ ಮೌಲ್ಯ ಹೊಂದಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಪನ್ನಾ ವಜ್ರದ ಗಣಿಯಲ್ಲಿ ಕಾರ್ಮಿಕನಿಗೆ 60 ಲಕ್ಷ ರೂ. ಮೌಲ್ಯದ ವಜ್ರ ಪತ್ತೆ