ನವದೆಹಲಿ: ಕೊರೊನಾ ವ್ಯಾಕ್ಸಿನೇಷನ್‌ಗೆ ಯಾವ ಕೊಮೊರ್ಬಿಡಿಟಿಗಳಿಗೆ ಆದ್ಯತೆ ನೀಡಬೇಕು ಎಂದು ನಿರ್ಧರಿಸಲು ಕ್ಲಿನಿಕಲ್ ಮಾನದಂಡಗಳನ್ನು ನಿಗದಿಪಡಿಸುವ ಪರಿಣಿತ ಸಮಿತಿಯು ಒಂದು ಅಥವಾ ಎರಡು ದಿನಗಳಲ್ಲಿ ತನ್ನ ವರದಿಯನ್ನು ನೀಡುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ ವಿಭಾಗ) ಡಾ. ವಿ.ಕೆ. ಪಾಲ್, ಮಾನದಂಡಗಳನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಇದು ರೋಗದ ತೀವ್ರತೆ ಮತ್ತು ಇತರ ನಿಯತಾಂಕಗಳನ್ನು ಅವಲಂಬಿಸಿ ಅಂತಹ ಜನರನ್ನು ಯಾವ ಆಧಾರದ ಮೇಲೆ ಗುರುತಿಸಬಹುದು ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಶಿಫಾರಸುಗಳನ್ನು ನೀಡುತ್ತದೆ. ಜುಲೈ ವೇಳೆಗೆ ಕನಿಷ್ಠ 30 ಕೋಟಿ ಆದ್ಯತೆಯ ಜನರಿಗೆ ಸಾಕಷ್ಟು ಲಸಿಕೆ ಸಿಗಲಿದೆ ಎಂಬ ಆಕಾಂಕ್ಷೆ ಇದೆ ಎಂದು ಹೇಳಿದರು.
ಇದನ್ನೂ ಓದಿ: ಗಂಗೂಲಿ ಡಿಸ್ಚಾರ್ಜ್ ಸಮಯ ಬದಲು: ಇನ್ನೊಂದು ದಿನ ಆಸ್ಪತ್ರೆಯಲ್ಲೇ ಉಳಿಯಲು ದಾದಾ ನಿರ್ಧಾರ!
ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಹೊರಡಿಸಿರುವ 'ಕೋವಿಡ್-19 ಲಸಿಕೆ ಕಾರ್ಯಾಚರಣೆಯ ಮಾರ್ಗಸೂಚಿ'ಗಳ ಪ್ರಕಾರ, ಲಸಿಕೆಯನ್ನು ಮೊದಲು ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರಿಗೆ ನೀಡಲಾಗುವುದು. ನಂತರ 50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ, ನಂತರ ಸಾಂಕ್ರಾಮಿಕ ಪರಿಸ್ಥಿತಿಯ ಆಧಾರದ ಮೇಲೆ ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.