ನವದೆಹಲಿ: ಚಿರಿಕೋಟ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತವು ಉದ್ದೇಶಪೂರ್ವಕವಾಗಿ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಪಾಕ್ ಈ ಹಿಂದೆ ಆರೋಪಿಸಿತ್ತು. ಆದರೆ ಈ ಆರೋಪವನ್ನು ತಳ್ಳಿ ಹಾಕಿದ ಭಾರತ," ಘಟನೆ ವಿಚಾರವಾಗಿ ಸಂಪೂರ್ಣ ತನಿಖೆ ನಡೆಸಲಾಗಿದ್ದು, ಇದು ಸುಳ್ಳು ಮಾಹಿತಿ ಮತ್ತು ತಪ್ಪು ಆರೋಪ" ಎಂದು ಹೇಳಿದೆ.
ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ ಮಾತನಾಡಿ, ಪಾಕಿಸ್ತಾನವು ಭಾರತದ ವಿರುದ್ಧ "ಆಧಾರರಹಿತ ಮತ್ತು ಕಪೋಲ ಕಲ್ಪಿತ" ಆರೋಪಗಳನ್ನು ಮಾಡುತ್ತಿದೆ. ಇದನ್ನು ಪುನರಾವರ್ತಿಸುವ ಬದಲು ಜವಾಬ್ದಾರಿಯುತವಾಗಿ ತನಿಖೆ ನಡೆಸಬೇಕು ಎಂದು ಹೇಳಿದೆ.
ಇದನ್ನು ಓದಿ: ವಿಮಾನಯಾನ ಉದ್ಯಮಿಗಳ ಜತೆ ಕೇಂದ್ರ ಸರ್ಕಾರ ಮಾತುಕತೆ
ಎಲ್‌ಐಸಿ ಉದ್ದಕ್ಕೂ ಚಿರಿಕೋಟ್ ಸೆಕ್ಟರ್‌ನಲ್ಲಿರುವ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ (ಯುಎನ್‌ಎಂಒ) ವಾಹನವನ್ನು ಭಾರತೀಯ ಪಡೆಗಳು ಗುರಿಯಾಗಿಸಿವೆ ಎಂದು ಪಾಕಿಸ್ತಾನ ಶುಕ್ರವಾರ ಆರೋಪಿಸಿತ್ತು. ಆ ದಿನವೇ ಭಾರತೀಯ ಸರ್ಕಾರದ ಮೂಲಗಳು ಆರೋಪಗಳನ್ನು ತಿರಸ್ಕರಿಸಿದ್ದವು.
ಇನ್ನು ಪಾಕಿಸ್ತಾನದ ಆರೋಪಗಳ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀವಾಸ್ತವ, "ಡಿಸೆಂಬರ್ 18 ರಂದು ಭಾರತೀಯ ಪಡೆಗಳು ಉದ್ದೇಶಪೂರ್ವಕವಾಗಿ ಯುಎನ್ ವಾಹನವನ್ನು ಗುರಿಯಾಗಿಸಿಕೊಂಡಿವೆ ಎಂಬ ಬಗ್ಗೆ ಪಾಕಿಸ್ತಾನದ ಆರೋಪಗಳನ್ನು ವಿವರವಾಗಿ ತನಿಖೆ ಮಾಡಲಾಗಿದೆ ಮತ್ತು ವಾಸ್ತವಿಕವಾಗಿ ಅದು ತಪ್ಪು ಆರೋಪ ಎಂದು ಕಂಡುಬಂದಿದೆ. ನಮ್ಮ ಸೈನಿಕರು ಈ ಪ್ರದೇಶದಲ್ಲಿ ಯುಎನ್ ಮಿಲಿಟರಿ ವೀಕ್ಷಕರ ಭೇಟಿಯ ಬಗ್ಗೆ ಈ ಹಿಂದೆಯೇ ತಿಳಿದಿದ್ದರು. ಅವರು ಯಾವುದೇ ಗುಂಡಿನ ದಾಳಿ ನಡೆಸಲಿಲ್ಲ" ಎಂದು ಹೇಳಿದರು.