ಜಲಂಧರ್ (ಪಂಜಾಬ್): ಪ್ರೀತಿಗೆ ಯಾವುದೇ ಗಡಿ ಮಿತಿಯಿಲ್ಲ ಮತ್ತು ನಿಜವಾದ ಪ್ರೇಮಿ ತನ್ನ ಪ್ರೀತಿಗಾಗಿ ಏಳು ಸಮುದ್ರಗಳನ್ನು ದಾಟಿ ಬೇಕಾದರೂ ಬರಬಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಪಾಕಿಸ್ತಾನದ ಹುಡುಗಿಯೊಬ್ಬಳ ಪ್ರೀತಿಗಾಗಿ ದೇಶದ ಗಡಿ ಭಾರತಕ್ಕೆ ಬಂದಿದ್ದಾಳೆ. ಭಾರತೀಯ ವರವನ್ನು ವರಿಸಲು ಸಹ ಸಜ್ಜಾಗಿದ್ದಾಳೆ.
ಹೌದು, ಪಂಜಾಬ್ನ ಜಲಂಧರ್‌ನ ಬಸ್ತಿ ಬಾವಾ ಖೇಲ್ ಪ್ರದೇಶದ ನಿವಾಸಿ ಕಮಲ್ ಕಲ್ಯಾಣ್ ಭರತ್ ಎಂಬ ಯುವಕನನ್ನು ವರಿಸಲು ಪಾಕಿಸ್ತಾನದಿಂದ ಶ್ಯಾಮಲಾ ಎಂಬ ಯುವತಿ ಭಾರತಕ್ಕೆ ಬಂದಿದ್ದಾರೆ. ವಿಶೇಷ ಎಂದರೆ ಇಬ್ಬರು ಸಂಬಂಧಿಕರು ಆಗಿದ್ದರೂ, ಇವರ ನಡುವೆ ಪ್ರೇಮದ ಸೇತುವೆ ಬೆಳೆದಿದ್ದು ಸೋಷಿಯಲ್ ಮೀಡಿಯಾದಲ್ಲಿ. ಅಲ್ಲಿಂದಲೇ ಇಬ್ಬರೂ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಂಡು ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ.
ಜುಲೈ 10ರಂದು ಮದುವೆ: ಕಮಲ್ ಕಲ್ಯಾಣ್ ಭರತ್ ಮತ್ತು ಶ್ಯಾಮಲಾ ಮದುವೆ ನಿಶ್ಚಯವಾಗಿದ್ದು, ಜುಲೈ 10ರಂದು ಜಲಂಧರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ಧಾರೆ. ಈ ಮದುವೆ ಸಮಾರಂಭದಿಂದ ಎರಡೂ ಕುಟುಂಬದ ಹಿರಿಯರು ಕೂಡ ಸಂತಸಗೊಂಡಿದ್ದಾರೆ.
ಐದು ವರ್ಷಗಳ ಹಿಂದೆ ಮೊದಲ ಭೇಟಿ: ಐದು ವರ್ಷಗಳ ಹಿಂದೆ ನಡೆದ ಮದುವೆ ಸಮಾರಂಭವೊಂದರಲ್ಲಿ ಶ್ಯಾಮಲಾ ಅವರನ್ನು ನೋಡಿದ್ದೆ. ಆದರೆ, ಆಗ ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಶ್ಯಾಮಲಾ ಸಂಪರ್ಕಕ್ಕೆ ಬಂದಿದ್ದರು. ಅಲ್ಲಿಯೇ ನಮ್ಮ ಸಂಭಾಷಣೆ ಶುರುವಾಗಿ ಪ್ರೀತಿಯೂ ಹರಡಿತು ಎನ್ನುತ್ತಾರೆ ಕಮಲ್ ಕಲ್ಯಾಣ್ ಭರತ್.
ಎರಡೂ ಕುಟುಂಬಗಳ ಒಪ್ಪಿಗೆ: ಕಮಲ್ ಕಲ್ಯಾಣ್ ಜೊತೆಗೆ ಪ್ರೀತಿಯ ಬಗ್ಗೆ ನಮ್ಮ ಪೋಷಕರಿಗೆ ತಿಳಿಸಿದೆ. ಅದಕ್ಕೆ ಅವರು ಕೂಡ ಒಪ್ಪಿದರು. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಿದ್ದೇನೆ ಎನ್ನುತ್ತಾರೆ ಪಾಕಿಸ್ತಾನದ ಶ್ಯಾಮಲಾ. ಅಲ್ಲದೇ, ಕಮಲ್ ಕುಟುಂಬದವರೇ ಪಾಕಿಸ್ತಾನಕ್ಕೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಆದ್ದರಿಂದ ನಮ್ಮ ಕುಟುಂಬದೊಂದಿಗೆ 45 ದಿನಗಳ ವೀಸಾದ ಮೇಲೆ ಜಲಂಧರ್ಗೆ ತಲುಪಿರುವೆ ಎಂದು ಶ್ಯಾಮಲಾ ತಿಳಿಸಿದ್ದಾರೆ.
ಇದನ್ನೂ ಓದಿ: 'ಇಬ್ಬರು ಸಿದ್ಧ ವಯಸ್ಕರ ನಡುವಿನ ಲೈಂಗಿಕ ಸಂಬಂಧ ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ': ಹೈಕೋರ್ಟ್