ಲಖನೌ (ಉತ್ತರ ಪ್ರದೇಶ): ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪಾಕಿಸ್ತಾನದ ವಂಚಕನೊಬ್ಬ ಬ್ರಿಟನ್ ಪ್ರಜೆಯಂತೆ ನಟಿಸಿ ಉತ್ತರ ಪ್ರದೇಶದ ಲಖನೌ ಮೂಲದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ 33 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ಕುರಿತು ಸಂತ್ರಸ್ತೆ ವಿಕಾಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯ ದೂರಿನಲ್ಲಿ ಏನಿದೆ?: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಬೆಳೆದ ಸ್ನೇಹ ಪ್ರೀತಿಗೆ ತಿರುಗಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡು 33 ಲಕ್ಷ ರೂ. ವಂಚಿಸಲಾಗಿದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ನನಗೆ ಈಗಾಗಲೇ ಮದುವೆಯಾಗಿದ್ದು, ಗಂಡನಿಂದ ವಿಚ್ಛೇದನ ಪಡೆದಿದ್ದೇನೆ. ಎರಡನೇ ಮದುವೆಯ ಉದ್ದೇಶಕ್ಕಾಗಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನನ್ನ ಪ್ರೊಫೈಲ್ ರಚಿಸಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮದುವೆ ಆತುರ.. ಮಾಯಾಂಗಿನಿಯ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಬೆಳಗಾವಿ ಯುವಕ!
ಈ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಡಾ. ಹ್ಯಾರಿ ಆನಂದ್ ಎಂಬ ಹೆಸರಿನಲ್ಲಿ ಸಂದೇಶ ಬಂದಿತ್ತು. ನಂತರ ಸಂಭಾಷಣೆಯಿಂದ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಇಂತಹ ಸಮಯದಲ್ಲಿ ಮದುವೆಯಾಗುವ ಬಗ್ಗೆ ಕೂಡ ಮಾತನಾಡಿದರು. ನಾನು ಬ್ರಿಟಿಷ್ ನಿವಾಸಿ ಮತ್ತು ಮೂಳೆ ಶಸ್ತ್ರಚಿಕಿತ್ಸಕ ಎಂದು ಹೇಳಿಕೊಂಡರು. ಮುಂದೆ ನಿರಂತರವಾಗಿ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.
ನಕಲಿ ಕಸ್ಟಮ್ ಅಧಿಕಾರಿ ಕರೆ: ಅಲ್ಲದೇ, ಇತ್ತೀಚೆಗೆ ಭಾರತಕ್ಕೆ ಬರುವ ಬಗ್ಗೆ ಹ್ಯಾರಿ ಮಾತನಾಡಿದ್ದರು. ಏತನ್ಮಧ್ಯೆ ಮಾರ್ಚ್ 21ರಂದು ವಂದನಾ ಮಿಶ್ರಾ ಎಂಬ ಮಹಿಳೆಯಿಂದ ಕರೆ ಬಂತು. ಆಗ ಈ ಮಹಿಳೆ ತಾನು ಕಸ್ಟಮ್ ಅಧಿಕಾರಿ ಎಂದು ಹೇಳಿಕೊಂಡರು. ಡಾ. ಹ್ಯಾರಿ ಆನಂದ್ ಬ್ರಿಟನ್ನಿಂದ ಪೌಂಡ್ (ಹಣ) ಕಳುಹಿಸಿದ್ದಾರೆ. ಅವರು ನಿಮಗೆ ಗೊತ್ತಾ ಎಂದು ಹೇಳಿದರು. ಇದೇ ವೇಳೆ ಹ್ಯಾರಿ ಆನಂದ್ ಸಹ ಕರೆ ಮಾಡಿ, ಕಸ್ಟಮ್ ಅಧಿಕಾರಿ ಕೇಳುವ ಮೊತ್ತವನ್ನು ಪಾವತಿಸುವಂತೆ ನನಗೆ ಹೇಳಿದ್ದರು. ಇದನ್ನೇ ನಾನು ನಿಜವೆಂದು ನಂಬಿದೆ. ನನ್ನಿಂದ ಮಾರ್ಚ್ 21ರಿಂದ ಏಪ್ರಿಲ್ 5ರವರೆಗೆ 33 ಲಕ್ಷ ರೂಪಾಯಿ ಪಾವತಿಸಿಕೊಂಡು ವಂಚಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಿರುವ ಮ್ಯಾಟ್ರಿಮೋನಿಯಲ್ ದೋಖಾ ಪ್ರಕರಣಗಳು: ಸೈಬರ್ ತಜ್ಞರು ಏನಂತಾರೆ?
ನಂತರ ಅನುಮಾನ ಬಂದಾಗ ಡಾ. ಹ್ಯಾರಿ ಆನಂದ್ ಒಬ್ಬ ವಂಚಕ ಎಂದು ಗೊತ್ತಾಗಿದೆ. ಅಲ್ಲದೇ, ಈತ ಬ್ರಿಟನ್ ಮೂಲದವನಲ್ಲ, ಪಾಕಿಸ್ತಾನದವನು ಎಂದು ತಿಳಿದುಬಂದಿದೆ. ತನ್ನನ್ನು ಬ್ರಿಟಿಷ್ ಸರ್ಜನ್ ಎಂದು ಹೇಳಿಕೊಂಡಿದ್ದ ಹ್ಯಾರಿ ಆನಂದ್‌ನ ನಿಜವಾದ ಹೆಸರು ಉಮರ್ ಮುಷ್ತಾಕ್ ಎಂದು ಗೊತ್ತಾಗಿದೆ. ಸದ್ಯ ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೈಬರ್ ಸೆಲ್ ಸಹಾಯದಿಂದ ವಂಚಕರನ್ನು ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಲಖನೌ ಉತ್ತರ ಡಿಸಿಪಿ ಕಾಸಿಂ ಅಬ್ದಿ ಹೇಳಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ವೇದಿಕೆ ಮೂಲಕ ಸಂಗಾತಿ ಹುಡುಕುವಿರಾ?: ಅಪಾಯಗಳ ಬಗ್ಗೆ ನಿಮ್ಮಲ್ಲಿರಲಿ ಎಚ್ಚರ!