ಇಸ್ಲಾಮಾಬಾದ್: ತನ್ನ ದೇಶದಲ್ಲಿಯೇ ಭಯೋತ್ಪಾದನೆ, ಹಸಿವು, ಬಡತನದಂತಹ ಹತ್ತು ಹಲವಾರು ಭೀಕರ ಸಮಸ್ಯೆಗಳ ಪರಿಹಾರಕ್ಕೆ ತಿಣುಕಾಡುತ್ತಿರುವ ಮತ್ತು ಅಧಿಕಾರದ ಅಭದ್ರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ಖಾನ್ ಬಲಿಷ್ಠ ರಾಷ್ಟ್ರಗಳಾದ ಚೀನಾ ಮತ್ತು ಅಮೆರಿಕ ದೇಶಗಳ ಮಧ್ಯೆ ಉಂಟಾಗಿರುವ ತ್ವೇಷಮಯ ವಾತಾವರಣವನ್ನು ಸುಧಾರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಇಸ್ಲಾಮಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಶಾಂತಿಯುತ ಮತ್ತು ಸಮೃದ್ಧ ದಕ್ಷಿಣ ಏಷ್ಯಾ' ಎಂಬ ವಿಷಯದ ಮೇಲೆ ಮಾತನಾಡಿರುವ ಇಮ್ರಾನ್ ಖಾನ್, ಪಾಕಿಸ್ತಾನ ವಿಶ್ವದ ಯಾವುದೇ ಬಣದ ಜೊತೆ ಗುರುತಿಸಿಕೊಳ್ಳಲು ಇಚ್ಛಿಸುವುದಿಲ್ಲ. ಬದಲಿಗೆ ಅಮೆರಿಕ ಮತ್ತು ಚೀನಾ ಮಧ್ಯೆ ಹೊಗೆಯಾಡುತ್ತಿರುವ ಶೀತಲ ಸಮರವನ್ನು ಅಂತ್ಯಗೊಳಿಸಲು ಉಭಯ ದೇಶಗಳ ಮಧ್ಯೆ ಮಾತುಕತೆಗೆ ಮಧ್ಯಸ್ಥಿಕೆದಾರನಾಗಲು ಸಿದ್ಧವಿದ್ದೇವೆ. ವಿಶ್ವದಲ್ಲಿ ಬಣ ರಾಜಕೀಯ ಹುಟ್ಟಿಕೊಳ್ಳುವುದನ್ನು ಪಾಕಿಸ್ತಾನ ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ರಷ್ಯಾ ಮತ್ತು ಅಮೆರಿಕ ಬಣಗಳಿಂದಾಗಿ ಜಗತ್ತು ಮತ್ತು ಪಾಕಿಸ್ತಾನ ಭಾರಿ ನಷ್ಟವನ್ನು ಅನುಭವಿಸಿದೆ. ಇದರಿಂದಾಗಿ ಹೊಸ ಬಣಗಳ ಮುಖಾಮುಖಿಯನ್ನು ಮತ್ತೆ ಎದುರಿಸುವುದು ಬೇಡ ಎಂದಿದ್ದಾರೆ.
ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಉಂಟಾದ ಬಿರುಕನ್ನು ನಿರ್ಣಾಯಕ ಹಂತದಲ್ಲಿ ಪಾಕಿಸ್ತಾನ ಮಧ್ಯಪ್ರವೇಶಿಸಿ ಉಂಟಾಗಬಹುದಾಗಿದ್ದ ಸಂಘರ್ಷವನ್ನು ತಡೆ ಹಿಡಿದಂತೆ, ಈಗ ಅಮೆರಿಕ ಮತ್ತು ಚೀನಾ ಮಧ್ಯೆ ಇರುವ ತ್ವೇಷಮಯ ವಾತಾವರಣ ದೂರ ಮಾಡಲು ಪಾಕಿಸ್ತಾನ ಪ್ರಯತ್ನಿಸಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಚೀನಾ ಮತ್ತು ಅಮೆರಿಕ ಮಧ್ಯೆ ವ್ಯಾಪಾರ-ವಹಿವಾಟು, ದಕ್ಷಿಣ ಚೀನಾ ಸಮುದ್ರದ ಗಡಿ ವಿವಾದ, ಹಾಂಗ್ಕಾಂಗ್, ಟಿಬೆಟ್ ಪ್ರದೇಶಗಳ ಮೇಲೆ ಚೀನಾ ಹಿಡಿತಕ್ಕೆ ಅಮೆರಿಕ ತೊಡರುಗಾಲು ಹಾಕಿರುವುದು ಎರಡು ದೇಶಗಳ ಮಧ್ಯೆ ಬಿರುಕು ಉಂಟು ಮಾಡಿದೆ.