ಜಮ್ಮು: ಮೂರು ದಶಕಗಳ ನಂತರ ಮೊದಲ ಬಾರಿಗೆ ಪಾಕಿಸ್ತಾನ ಸೇನೆಯು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕನೊಬ್ಬನ ಶವವನ್ನು ಸ್ವೀಕರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿ ಸಬ್ಜ್‌ಕೋಟ್ ಗ್ರಾಮದ ತಬಾರಕ್ ಹುಸೇನ್ (32) ಎಂಬ ಭಯೋತ್ಪಾದಕನೋರ್ವನ ಮೃತದೇಹವನ್ನು ಸೋಮವಾರ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಹಸ್ತಾಂತರಿಸಿತು. ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿರುವ (ಎಲ್‌ಒಸಿ) ಚಕನ್ ದಾ ಬಾಗ್ ಕ್ರಾಸಿಂಗ್ ಪಾಯಿಂಟ್‌ನಲ್ಲಿ ಸಿವಿಲ್ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆಯಿತು.
ತಬಾರಕ್ ಹುಸೇನ್ ಈತ ಎರಡು ದಿನಗಳ ಹಿಂದೆ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ. ಆಗಸ್ಟ್ 21 ರಂದು ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಿಂದ ಭಾರತದ ಒಳಗೆ ನುಸುಳುತ್ತಿರುವಾಗ ಈತ ಗಾಯಗೊಂಡಿದ್ದ. ಪಾಕಿಸ್ತಾನದ ಐಎಸ್‌ಐನಿಂದ ಭಾರತೀಯ ಸೇನಾ ಪೋಸ್ಟ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಲು ಈತನನ್ನು ನೇಮಿಸಲಾಗಿತ್ತು.
2016 ರಲ್ಲಿ ಇದೇ ತಬಾರಕ್ ಹುಸೇನ್ ತನ್ನ ಸಹೋದರ ಹರೂನ್ ಅಲಿಯೊಂದಿಗೆ ಇದೇ ವಲಯದಲ್ಲಿ ಭಾರತದೊಳಗೆ ನುಸುಳುತ್ತಿರುವಾಗ ಬಂಧಿಸಲ್ಪಟ್ಟಿದ್ದ. ಆದರೆ ನಂತರದ ವರ್ಷದಲ್ಲಿ ಮಾನವೀಯ ಆಧಾರದಲ್ಲಿ ಈತನನ್ನು ವಾಘಾ-ಅಟ್ಟಾರಿ ಗಡಿಯ ಮೂಲಕ ಪಾಕಿಸ್ತಾನಕ್ಕೆ ವಾಪಸು ಕಳುಹಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರಿಂದ ಹಿಂಸಾಚಾರ ಆರಂಭವಾದಾಗಿನಿಂದ ಅಲ್ಲಿ ಹತರಾಗುವ ಭಯೋತ್ಪಾದಕರ ಶವಗಳನ್ನು ಸ್ವೀಕರಿಸಲು ಪಾಕಿಸ್ತಾನ ಯಾವಾಗಲೂ ನಿರಾಕರಿಸುತ್ತಲೇ ಬಂದಿದೆ. 1999 ರ ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿಯೂ ಸಹ, ಭಾರತೀಯ ಸೇನೆಯ ವಿರುದ್ಧ ಹೋರಾಡುವಾಗ ಕೊಲ್ಲಲ್ಪಟ್ಟ ತನ್ನ ಸೈನಿಕರ ಶವಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿತ್ತು.
ಇದನ್ನೂ ಓದಿ: ಭಯೋತ್ಪಾದಕರ ನಂಟು ಆರೋಪ: 8 ಬುಲ್ಡೋಜರ್ ಬಳಸಿ ಮದರಸಾ ನೆಲಸಮ