ಕೋಯಿಕ್ಕೋಡ್ (ಕೇರಳ): ಎರಡು ವರ್ಷದ ಪಾಕಿಸ್ತಾನದ ಬಾಲಕನಿಗೆ ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ಅಸ್ಥಿಮಜ್ಜೆ ಬದಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಾಕಿಸ್ತಾನ ಮತ್ತು ಯುಎಇನ ವೈದ್ಯರು ಕೈಚೆಲ್ಲಿದ್ದ ಪ್ರಕರಣವನ್ನು ಕೋಯಿಕ್ಕೋಡ್ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಪುಟ್ಟ ಬಾಲಕನಿಗೆ ಮರು ಜೀವ ನೀಡಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನ ಮೂಲದ ಜಲಾಲ್ ಮತ್ತು ಸಾಧುರಿ ದಂಪತಿಯ ಪುತ್ರ ಸೈಫ್ ಜಲಾಲ್ ಸಿವಿಯರ್ ಕಂಬೈನ್ಡ್ ಇಮ್ಯುನೊ ಡಿಫಿಷಿಯನ್ಸಿ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದನು. ಈ ರೋಗಕ್ಕೆ ಜಗತ್ತಿನಲ್ಲಿ ಎಲ್ಲಿಯೂ ಚಿಕಿತ್ಸೆ ಇಲ್ಲದಿರುವುದರಿಂದ ಅವನು ಬದುಕುಳಿಯುವುದಿಲ್ಲ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.
ಆದರೂ ತಮ್ಮ ಪ್ರಯತ್ನ ಬಿಡದ ಬಾಲಕನ ಪೋಷಕರು ಪಾಕಿಸ್ತಾನದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಅಲ್ಲದೇ ಬಳಿಕ ಯುಎಇಗೂ ಚಿಕಿತ್ಸೆಗೆಂದು ಬಾಲಕನನ್ನು ಕರೆದೊಯ್ದರು. ಯುಎಇಯಲ್ಲಿ ಬಾಲಕನಿಗೆ ಕೀಮೋಥೆರಪಿ ಚಿಕಿತ್ಸೆ ನೀಡಲಾಯಿತು. ಇದರಿಂದ ಬಾಲಕನಿಗೆ ಶ್ವಾಸಕೋಶದ ಸೋಂಕು ಉಂಟಾಗಿ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡಿತು. ಬಳಿಕ ಬಾಲಕನ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು.
ಕೋಯಿಕ್ಕೋಡ್ನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ : ಈ ನಡುವೆ ಜಲಾಲ್ ಮತ್ತು ಸಾಧುರಿ ದಂಪತಿ, ಕೇರಳದ ಆಸ್ಟರ್ ಮಲಬಾರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (MIMS) ಲಭ್ಯವಿರುವ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡರು. ತಡ ಮಾಡದೇ ತಮ್ಮ ಪ್ರಯಾಣಕ್ಕೆ ಅನುಕೂಲವಾಗುವಂತೆ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ಅಲ್ಲಿಂದ ಭಾರತೀಯ ಅಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ಬಾಲಕನನ್ನು ಕೋಯಿಕ್ಕೋಡ್‌ಗೆ ಕರೆತರಲಾಯಿತು.
ಅಪರೂಪದ ಅಸ್ಥಿಮಜ್ಜೆ ಬದಲಿ ಶಸ್ತ್ರಚಿಕಿತ್ಸೆ : ಇಲ್ಲಿನ ಆಸ್ಟರ್ ಮಿಮ್ಸ್‌ನ ಹೆಮಟಾಲಜಿಸ್ಟ್ ವೈದ್ಯರ ತಂಡವು ಮಗುವನ್ನು ಸಂಪೂರ್ಣ ತಪಾಸಣೆ ನಡೆಸಿತು. ಬಳಿಕ ಮಗುವಿನ ತಾಯಿಯ ಅಸ್ಥಿ ಮಜ್ಜೆಯು ಮಗುವಿನ ಅಸ್ಥಿಮಜ್ಜೆಗೆ ಪೂರ್ಣ ಹೊಂದಾಣಿಕೆ ಇರುವುದನ್ನು ಕಂಡುಕೊಂಡ ವೈದ್ಯರು, ಅಸ್ಥಿ ಮಜ್ಜೆ ಕಸಿ ಶಸ್ತ್ರಚಿಕಿತ್ಸೆ ನಡೆಸಿದರು. ಇದೀಗ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ಬಳಿಕ ಸೈಫ್ ಜಲಾಲ್ ಚೇತರಿಕೊಂಡಿದ್ದಾನೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ ಕೇಶವನ್, ಮಗುವಿನ ಅಸ್ಥಿ ಮಜ್ಜೆಯೊಂದಿಗೆ ತಾಯಿ ಅಸ್ಥಿಮಜ್ಜೆ ಸಂಪೂರ್ಣ ಹೊಂದಾಣಿಕೆ ಇತ್ತು. ಆದ್ದರಿಂದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು. ಈಗ ಮಗುವಿಗೆ ಆಮ್ಲಜನಕ ಅಳವಡಿಸಿಲ್ಲ. ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಹೇಳಿದರು.
ನಾವು ಇಲ್ಲಿಗೆ ಬಂದಾಗ, ನಮ್ಮ ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿತ್ತು. ನಾವು ಚಿಕಿತ್ಸೆ ನೀಡಲು ಸಿದ್ಧವಾಗಿದ್ದೇವೆ ಎಂದು ವೈದ್ಯರು ಹೇಳಿದರು. ಅಂತೆಯೇ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ನಂತರ ಬಾಲಕ ಈಗ ಗುಣಮುಖನಾಗಿದ್ದಾನೆ. ನಮಗೆ ಸಹಾಯ ಮಾಡಿದ ಎಲ್ಲರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಬಾಲಕನ ತಂದೆ ಎಂದು ಜಲಾಲ್ ಹೇಳಿದ್ದಾರೆ.
ಇದನ್ನೂ ಓದಿ : ಮಹಿಳೆ ಗರ್ಭಕೋಶದಲ್ಲಿ ಹೈಡಾಟಿಡ್ ಸಿಸ್ಟ್ ಕಾಯಿಲೆ ಪತ್ತೆ: ಯಶಸ್ವಿ ಶಸ್ತ್ರಚಿಕಿತ್ಸೆ