ಕಟಕ್(ಒಡಿಶಾ): ಖ್ಯಾತ ಸಾಮಾಜಿಕ ಕಾರ್ಯಕರ್ತ ಮತ್ತು ಚಹಾ ಮಾರಾಟಗಾರ ಪದ್ಮಶ್ರೀ ಪುರಸ್ಕೃತ ಡಿ. ಪ್ರಕಾಶ್ ರಾವ್ ತಮ್ಮ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರಿಗೆ 2019ರಲ್ಲಿ ಭಾರತದ ಅತ್ಯುನ್ನತ ಗೌರವ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.
20 ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿದ್ದ ಇವರನ್ನು ಎಸ್ಸಿಬಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಜತೆಗೆ ಬ್ರೇನ್ ಸ್ಟ್ರೋಕ್ಗೊಳಗಾಗಿದ್ದ ಇವರು ಇಂದು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ದೇಶವನ್ನುದ್ದೇಶಿಸಿ 44ನೇ 'ಮನ್ ಕೀ ಬಾತ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡ್ತಿದ್ದ ವೇಳೆ ಡಿ.ಪ್ರಕಾಶ್ ರಾವ್ ಬಗ್ಗೆ ಹೊಗಳಿದ್ದರು.
ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದ್ದ ಕಾರಣ ಕೇವಲ 6ನೇ ವಯಸ್ಸಿನಿಂದ ಟೀ ಮಾರಾಟ ಮಾಡಲು ಆರಂಭಿಸಿದ್ದ ಇವರು ಬರೋಬ್ಬರಿ 54 ವರ್ಷಗಳ ಕಾಲ ಟೀ ಮಾರಾಟ ಮಾಡಿದ್ದಾರೆ. ಜತೆಗೆ ಐದನೇ ತರಗತಿಯಲ್ಲೇ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು.
ತಾವು ಶಿಕ್ಷಣ ಕಲಿಯಲು ಸಾಧ್ಯವಾಗಲಿಲ್ಲ ಎಂಬುದನ್ನೇ ಸವಾಲಾಗಿ ಸ್ವೀಕರಿಸಿ 'ಆಶಾ ಅಶ್ವವಾಸನ್' ಎಂಬ ಶಾಲೆ ತೆರೆದಿದ್ದರು. ತಮಗೆ ಬರುತ್ತಿದ್ದ ಆದಾಯದ ಶೇ. 50ರಷ್ಟು ಹಣ ಕೊಳಗೇರಿ ಮತ್ತು ಗುಡಿಸಲುಗಳಲ್ಲಿ ವಾಸಿಸುವ ಮಕ್ಕಳಿಗೆ ಖರ್ಚು ಮಾಡುತ್ತಿದ್ದರು.