ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಇಂದು ಕೂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿತರಿಸಿದರು.
ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡಲಾಗಿದ್ದು, ಅವರ ಪುತ್ರ ಕಲ್ಯಾಣ್ ಚರಣ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಕರ್ನಾಟಕದ ಖ್ಯಾತ ವೈದ್ಯ ಡಾ.ಬೆಳ್ಳೆ ಮೋನಪ್ಪ ಹೆಗ್ಡೆ ಅವರು ಪದ್ಮವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದರು.
ಜಾನಪದ ಕಲಾವಿದೆ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ, ಕ್ರೀಡಾಪಟು ಕೆ.ವೈ.ವೆಂಕಟೇಶ್ ಅವರು ಪದ್ಮಶ್ರೀ ಪ್ರಶಸ್ತಿ ಪಡೆದರು.

ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರಾ ಅವರಿಗೆ ಪದ್ಮಭೂಷಣ ನೀಡಲಾಯಿತು. ಲೋಕಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್ ವಿಲಾಸ್ ಪಾಸ್ವಾನ್, ಗುಜರಾತ್ ಮಾಜಿ ಮುಖ್ಯಮಂತ್ರಿ ದಿ. ಕೇಶುಭಾಯ್ ಪಟೇಲ್ ಅವರೂ ಪದ್ಮಭೂಷಣ ಪ್ರಶಸ್ತಿಗೆ ಭಾಜನಾರಾದರು.

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಗಿದ್ದು, ಅವರ ಪತ್ನಿ ಡಾಲಿ ಗೊಗೊಯ್ ಪ್ರಶಸ್ತಿ ಸ್ವೀಕರಿಸಿದರು.

ಈ ವರ್ಷ ಒಟ್ಟು 119 ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಈ ಬಾರಿ 7 ಮಂದಿಗೆ ಪದ್ಮವಿಭೂಷಣ, 10 ಸಾಧಕರಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 29 ಮಂದಿ ಮಹಿಳೆಯರಿದ್ದಾರೆ. ಪಟ್ಟಿಯಲ್ಲಿ 10 ಮಂದಿ ವಿದೇಶಿಯರು, ಎನ್‌ಆರ್‌ಐ, ಪಿಐಒ, ಒಸಿಐ ವ್ಯಕ್ತಿಗಳಿದ್ದಾರೆ. 16 ಸಾಧಕರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಒಬ್ಬರು ತೃತೀಯ ಲಿಂಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಲೆ, ಸಮಾಜಸೇವೆ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಸಲ್ಲಿಸಿದ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ‘ಪದ್ಮವಿಭೂಷಣ'; ಉನ್ನತ ಮಟ್ಟದ ವಿಶಿಷ್ಟ ಸೇವೆಗಾಗಿ ‘ಪದ್ಮಭೂಷಣ’ ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
