ಗಾಜಿಯಾಬಾದ್ : ಎರಡು ಪ್ರತ್ಯೇಕ ಅಪಘಾತಗಳಲ್ಲಿ 24 ವಾಹನಗಳು ಜಖಂಗೊಂಡ್ರೆ, ನಿವೃತ್ತ ಪೊಲೀಸ್ ಅಧಿಕಾರಿ ಫ್ಯಾಮಿಲಿ ಸೇರಿ ಐವರು ಸಾವನ್ನಪ್ಪಿದ್ದಾರೆ.
24 ವಾಹನಗಳು ಜಖಂ: ದಟ್ಟ ಮಂಜು ಆವರಣದಿಂದಾಗಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಸುಮಾರು 24ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದಾವೆ. ಈ ಸರಣಿ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ನಂತರ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದವು. ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಕ್ರೇನ್‌ಗಳ ಮೂಲಕ ಜಖಂಗೊಂಡ ವಾಹನಗಳನ್ನು ತೆರವುಗೊಳಿಸಲಾಯಿತು. ದೀಪಾವಳಿಯ ನಂತರದ ರಾತ್ರಿ ರಾಷ್ಟ್ರೀಯ ರಾಜಧಾನಿ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಅನೇಕ ಪ್ರದೇಶಗಳಲ್ಲಿ AQI 450 ಕ್ಕಿಂತ ಹೆಚ್ಚು ದಾಖಲಾಗಿತ್ತು.
ನಿವೃತ್ತ ಪೊಲೀಸ್ ಅಧಿಕಾರಿ ಫ್ಯಾಮಿಲಿ ಸಾವು: ಶುಕ್ರವಾರ ಬೆಳಗ್ಗೆ 4 ಗಂಟೆ ಸುಮಾರು ಮಥುರಾದ ನೌಜೀಲ್ ಪ್ರದೇಶದ 71 ನೇ ಮೈಲಿಗಲ್ಲು ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ, ಮಗ ಹಾಗೂ ಆಗ್ರಾ-ನೋಯ್ಡಾ ಬಸ್‌ನ ಚಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶಿರೀಶ್ ಚಂದ್ರ ತಿಳಿಸಿದ್ದಾರೆ.
ಮುಂಜಾನೆ 4 ಗಂಟೆಗೆ ನೋಯ್ಡಾಗೆ ತೆರಳುತ್ತಿದ್ದ ಖಾಲಿ ಖಾಸಗಿ ಬಸ್‌ನ ಚಾಲಕ ನಿದ್ರಾಹೀನತೆಯಿಂದ ವಾಹನವನ್ನು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರ ಐವರು ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮೊದಲು ಮಥುರಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಆಗ್ರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೃತರನ್ನು ಗಾಜಿಯಾಬಾದ್ ಮೂಲದ ಉತ್ತರಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿ ವೇದ್ ಪ್ರಕಾಶ್ ಯಾದವ್ ಮಗ ಶಿವ ಸಾಗರ್ ಯಾದವ್ (27), ಅವರ ತಾಯಿ ಪ್ರೇಮಲಾಲಾ (55), ಸೋದರ ಸಂಬಂಧಿ ಗೌರವ್ (29) ಮತ್ತು ಕಿರಿಯ ಸಹೋದರ ಮೋಹಿನೇಶ್ ಅವರ ಸ್ನೇಹಿತ ಆರ್ಯನ್ ಚೌಧರಿ (22) ಮತ್ತು ಬಸ್ ಚಾಲಕ ಬಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ.
ಪಂಜಾಬ್‌ನ ಪಠಾಣ್‌ಕೋಟ್ ನಿವಾಸಿ ಮೋಹಿನೇಶ್ ಆಗ್ರಾದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶಿರೀಶ್ ಚಂದ್ರ ತಿಳಿಸಿದ್ದಾರೆ.