ನವದೆಹಲಿ : ದೀಪಾವಳಿ ವೇಳೆ ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿದ್ದರೂ ಲೆಕ್ಕಿಸದೆ ಪಟಾಕಿ ಸಿಡಿಸಿದ 850 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪಟಾಕಿ ಮಾರಾಟ ಮಾಡಿದ ಮತ್ತು ಸಿಡಿಸಿದವರ ಮೇಲೆ 1,200 ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಒಟ್ಟು 1,314 ಕೆ.ಜಿ ಪಟಾಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ದೆಹಲಿಯ ರೋಹಿಣಿ ಜಿಲ್ಲೆಯಿಂದ ಸುಮಾರು 139 ಕರೆಗಳು ಬಂದಿವೆ, 65 ಎಫ್ಐಆರ್ ದಾಖಲಿಸಲಾಗಿದೆ. ಈ ಪೈಕಿ ಎರಡು ಪ್ರಕರಣಗಳು ಅನಧಿಕೃತ ಪಟಾಕಿ ಮಾರಾಟ ಮಾಡಿದ್ದಕ್ಕಾಗಿ ದಾಖಲಾಗಿವೆ. ದ್ವಾರಕಾ ಜಿಲ್ಲೆಯಲ್ಲಿ ಪಟಾಕಿ ಸಿಡಿಸಿದವರ ಮೇಲೆ 72 ಪ್ರಕರಣಗಳು ದಾಖಲಾಗಿವೆ.
ದೆಹಲಿಯ ದಕ್ಷಿಣ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರ ಮಾಹಿತಿ ಪ್ರಕಾರ, 147 ಕರೆಗಳನ್ನು ಸ್ವೀಕರಿಸಲಾಗಿದ್ದು, 85 ಪ್ರಕರಣ ದಾಖಲಿಸಲಾಗಿದೆ. ಆರು ಜನರನ್ನು ಬಂಧಿಸಲಾಗಿದ್ದು, 68.85 ಕೆ.ಜಿ ಪಟಾಕಿ ವಶಪಡಿಸಿಕೊಳ್ಳಲಾಗಿದೆ.
ಉತ್ತರ ಜಿಲ್ಲೆಗಳಿಂದ ಕಡಿಮೆ ಕರೆಗಳು ಬಂದಿದ್ದು, ಕೇವಲ 6 ಪ್ರಕರಣ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳಿಂದ ದೆಹಲಿಯಾದ್ಯಂತ ವಾಯುಮಾಲಿನ್ಯ ಮಟ್ಟ ಮಿತಿ ಮೀರಿದ್ದು, ನಗರ ಸಂಪೂರ್ಣ ಹೊಗೆಯಿಂದ ಆವರಿಸಿದೆ.