ನವದೆಹಲಿ : 15 ವರ್ಷಕ್ಕಿಂತ ಹಳೆಯದಾದ ನಾಲ್ಕು ಕೋಟಿ ವಾಹನಗಳು ಭಾರತದ ರಸ್ತೆಗಳ ಮೇಲೆ ಚಲಿಸುತ್ತಿವೆ ಮತ್ತು ಹಸಿರು ತೆರಿಗೆಯ ವ್ಯಾಪ್ತಿಗೆ ಬರುತ್ತವೆ. ಕರ್ನಾಟಕವು 70 ಲಕ್ಷಕ್ಕೂ ಹೆಚ್ಚು ಹಳೆಯ ವಾಹನಗಳನ್ನು ಹೊಂದಿದ್ದು ಅಗ್ರ ಸ್ಥಾನದಲ್ಲಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷ ದ್ವೀಪಗಳನ್ನು ಹೊರತುಪಡಿಸಿ ದೇಶಾದ್ಯಂತ ಇಂತಹ ವಾಹನಗಳ ಡೇಟಾವನ್ನು ಡಿಜಿಟಲೀಕರಣಗೊಳಿಸಿದೆ. ಹಸಿರು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಈಗಾಗಲೇ ರಾಜ್ಯಗಳಿಗೆ ಕಳುಹಿಸಲಾಗಿದೆ.
ಅಂಕಿ-ಅಂಶಗಳ ಪ್ರಕಾರ, ನಾಲ್ಕು ಕೋಟಿಗಿಂತ ಹೆಚ್ಚು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿದೆ ಎಂದು ಕಂಡು ಬಂದಿದೆ. ಇದರಲ್ಲಿ ಎರಡು ಕೋಟಿಗೂ ಹೆಚ್ಚು, 20 ವರ್ಷಗಳಿಗಿಂತ ಹೆಚ್ಚು ಹಳೆಯ ವಾಹನಗಳಾಗಿವೆ.
56.54 ಲಕ್ಷ ವಾಹನಗಳೊಂದಿಗೆ ಉತ್ತರಪ್ರದೇಶ 2ನೇ ಸ್ಥಾನ ಪಡೆದಿದೆ. ಅದರಲ್ಲಿ 24.55 ಲಕ್ಷಗಳು 20 ವರ್ಷಕ್ಕಿಂತ ಹಳೆಯವು. ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳ ವಿಷಯದಲ್ಲಿ ರಾಜಧಾನಿ ದೆಹಲಿ 49.93 ಲಕ್ಷ ಹಳೆ ವಾಹನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ, ಅದರಲ್ಲಿ 35.11 ಲಕ್ಷಗಳು 20 ವರ್ಷಕ್ಕಿಂತ ಹಳೆಯವು.
ಕೇರಳದಲ್ಲಿ ಅಂತಹ 34.64 ಲಕ್ಷ ವಾಹನಗಳನ್ನು ಹೊಂದಿದ್ದು, ತಮಿಳುನಾಡಿನಲ್ಲಿ 33.43 ಲಕ್ಷ, ಪಂಜಾಬ್‌ನಲ್ಲಿ 25.38 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 22.69 ಲಕ್ಷ ವಾಹನಗಳಿವೆ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರ, ಒಡಿಶಾ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣ ಈ ವಾಹನಗಳನ್ನು 17.58 ಲಕ್ಷ ಮತ್ತು 12.29 ಲಕ್ಷ ವ್ಯಾಪ್ತಿಯಲ್ಲಿ ಹೊಂದಿವೆ.
ಇದನ್ನೂ ಓದಿ: ಹಳೇ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲು ಕೇಂದ್ರ ಸಜ್ಜು: ಯಾವೆಲ್ಲಾ ವೈಹಿಕಲ್ಸ್ಗೆ ಎಷ್ಟು ಟ್ಯಾಕ್ಸ್?
ಅಂತಹ ವಾಹನಗಳ ಸಂಖ್ಯೆ ಜಾರ್ಖಂಡ್, ಉತ್ತರಾಖಂಡ್, ಛತ್ತೀಸ್‌ಗಢ, ಹಿಮಾಚಲಪ್ರದೇಶ, ಪುದುಚೇರಿ, ಅಸ್ಸೋಂ, ಬಿಹಾರ, ಗೋವಾ, ತ್ರಿಪುರ ಮತ್ತು ದಾದ್ರಾ-ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರ ಪ್ರದೇಶಗಳಿಗೆ 1 ಲಕ್ಷದಿಂದ 5.44 ಲಕ್ಷದವರೆಗೆ ಇರುತ್ತದೆ. ಕೇಂದ್ರದ ಅಂಕಿ-ಅಂಶಗಳ ಪ್ರಕಾರ ಉಳಿದ ರಾಜ್ಯಗಳು ತಲಾ ಒಂದು ಲಕ್ಷಕ್ಕಿಂತ ಕಡಿಮೆ ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹೊಂದಿವೆ.
ಪರಿಸರವನ್ನು ರಕ್ಷಿಸಲು ಮತ್ತು ಮಾಲಿನ್ಯವನ್ನು ತಡೆಯಲು ಹಳೆಯ ವಾಹನಗಳಿಗೆ ಶೀಘ್ರದಲ್ಲೇ ಹಸಿರು ತೆರಿಗೆ ವಿಧಿಸಲು ಸರ್ಕಾರ ಯೋಜಿಸಿದೆ.