ಗುವಾಹಟಿ: ಅಸ್ಸೋಂನಲ್ಲಿ ಕೋವಿಡ್ 2ನೇ ಅಲೆ ವೇಳೆ 18 ವರ್ಷದೊಳಗಿನ 34,066 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ರಾಜ್ಯದ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ಡಾ.ಲಕ್ಷ್ಮಣನ್.ಎಸ್ ತಿಳಿಸಿದ್ದಾರೆ.
ಈ ಬಗ್ಗೆ ಅಂಕಿಅಂಶ ನೀಡಿರುವ ಲಕ್ಷ್ಮಣನ್, ಈ ವರ್ಷದ ಏಪ್ರಿಲ್‌ನಿಂದ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಇದು ಶೇಕಡಾ 12 ರಷ್ಟಿದೆ. ಒಟ್ಟು 5,755 ಪ್ರಕರಣಗಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರೆ, 28,851 ಪ್ರಕರಣಗಳು 6 ರಿಂದ 18 ವರ್ಷದೊಳಗಿನವು. 34,066 ಪಾಸಿಟಿವ್ ಪ್ರಕರಣಗಳಲ್ಲಿ, 34 ಮಕ್ಕಳು ಹೆಚ್ಚಾಗಿ ಇತರೆ ರೋಗಗಳನ್ನು ಹೊಂದಿರುವವರು ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಹೆಚ್ಚಿನವು ಹೃದಯ ಸಂಬಂಧಿತ ಕಾಯಿಲೆಗಳು, ಮೂತ್ರಪಿಂಡ ಹಾಗೂ ಇತರೆ ರೋಗಗಳಿಗೆ ಒಳಗಾಗಿದ್ದವರು. ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಇಂತಹ ಸಾಧ್ಯತೆಗಳು ಇರುತ್ತವೆ ಎಂದು ಹೇಳಿದ್ದಾರೆ.
ಮೆಟ್ರೋ ನಗರ ಕಮ್ರಪ್ ಅತಿ ಹೆಚ್ಚು ಪ್ರಕರಣಗಳ ದಾಖಲಾಗುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ 5,346 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಇದು ಜಿಲ್ಲೆಯ ಒಟ್ಟು 53,251 ಮಕ್ಕಳ ಪೈಕಿ ಶೇಕಡಾ 10.04 ರಷ್ಟಿದೆ. 2,430 ಪ್ರಕರಣಗಳು ದಾಖಲಾಗುವ ಮೂಲಕ ದಿಬ್ರುಗರ್ 2ನೇ ಸ್ಥಾನದಲ್ಲಿದೆ. ಇದು ಜಿಲ್ಲೆಯ ಒಟ್ಟು 19,937 ಕೋವಿಡ್ ಪ್ರಕರಣಗಳಲ್ಲಿ ಶೇ. 12.19 ರಷ್ಟಿದೆ.
ನಾಗಾನ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,288 ಮಂದಿಗೆ ಸೋಂಕು ತಗುಲಿದ್ದು, ಮೂರನೇ ಸ್ಥಾನದಲ್ಲಿದೆ ಮತ್ತು ಇದು ಒಟ್ಟು 15,910 ಪ್ರಕರಣಗಳಲ್ಲಿ ಶೇಕಡಾ 14.38 ರಷ್ಟಿದೆ. ಕಮ್ರಪ್ ಗ್ರಾಮೀಣ ಪ್ರದೇಶದ 2,023 ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದು ಒಟ್ಟು 17,216 ಪ್ರಕರಣಗಳಲ್ಲಿ ಶೇಕಡಾ 11.75 ರಷ್ಟಿದೆ. 1,839 ಪ್ರಕರಣಗಳೊಂದಿಗೆ ಸೋನಿತ್‌ಪುರ ಐದನೇ ಸ್ಥಾನದಲ್ಲಿದೆ, ಇದು ಜಿಲ್ಲೆಯ ಒಟ್ಟು 13,239 ಪ್ರಕರಣಗಳಲ್ಲಿ ಶೇಕಡಾ 13.89 ರಷ್ಟಿದೆ. ಇತರೆ ನಗರ ಪ್ರದೇಶಗಳಲ್ಲೂ ಮಕ್ಕಳಿಗೆ ಸೋಂಕು ಬಾಧಿಸಿದೆ.