ಬಾಲಸೋರ್(ಒಡಿಶಾ): ಕೋವಿಡ್ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದು, ಅದೆಷ್ಟೋ ಮಕ್ಕಳನ್ನು ಅನಾಥವಾಗಿಸಿದೆ. ಮಗು ಕಣ್ತೆರೆಯುತ್ತಿದ್ದಂತೆ ತಂದೆ, ತಾಯಿ ಮಸಣ ಸೇರಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಅಂಥಹದ್ದೇ ಒಂದು ಮನಕಲಕುವ ಘಟನೆ ಬಾಲಸೋರ್ನ ಭೋಗರೈ ಬ್ಲಾಕ್ನ ನಿಮಾತ್ಪುರದಲ್ಲಿ ನಡೆದಿದೆ.
ಹುಟ್ಟುತ್ತಲೇ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಗುವಿಗೆ ಅಕ್ಕನೇ ತಾಯಿಯಾಗಿದ್ದಾಳೆ. ತನ್ನ ದೊಡ್ಡಮ್ಮನ ನೆರವಿನಿಂದ ಒಂದೂವರೆ ತಿಂಗಳ ಕೂಸನ್ನು ಆರೈಕೆ ಮಾಡುತ್ತಿದ್ದಾಳೆ ಏಳು ವರ್ಷದ ಬಾಲೆ. ಕಮಲೇಶ್ ಪಾಂಡೆ (36) ಭುವನೇಶ್ವರದ ಪೂರ್ವ ಕರಾವಳಿಯ ರೈಲ್ವೆ ಅಧಿಕಾರಿಯಾಗಿದ್ದರು. ಅವರ ಪತ್ನಿ ಸ್ಮಿತಾ (28) ಕಟಕ್ನ ಆಚಾರ್ಯ ಹರಿಹರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸಿದ್ದರು.
ಏಪ್ರಿಲ್ 15 ರಂದು ಗರ್ಭಿಣಿಯಾಗಿದ್ದ ಸ್ಮಿತಾಗೆ ಕೋವಿಡ್ ದೃಢಪಟ್ಟಿದ್ದು, ಎಸ್‌ಸಿಬಿ ಮೆಡಿಕಲ್‌ನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಳು. ಆ ಸಮಯದಲ್ಲೇ ಆಕೆಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಒಂದು ವಾರದ ನಂತರ ರೋಗಲಕ್ಷಣಗಳು ತೀವ್ರಗೊಂಡು ಚಿಕಿತ್ಸೆ ಫಲಿಸದೆ ಸ್ಮಿತಾ ಮೃತಪಟ್ಟಿದ್ದಾರೆ. ಇತ್ತ ಪತಿ ಕಮಲೇಶ್ ಮಕ್ಕಳ ಜತೆಗೆ ತಮ್ಮ ಹಳ್ಳಿಗೆ ಮರಳಿ ಸಹೋದರನ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ. ಆದರೆ, ದುರದೃಷ್ಟವಶಾತ್ 15 ದಿನಗಳ ಬಳಿಕ ಆತನಿಗೂ ಕೋವಿಡ್ ಬಂದು ಮೃತಪಡುತ್ತಾರೆ. ಹಸುಗೂಸು ಕಣ್ತೆರೆಯುವ ಮುನ್ನವೇ ಪೋಷಕರನ್ನು ಕಳೆದುಕೊಂಡು ಅನಾಥವಾಗಿದೆ. ಆ ಪುಟ್ಟ ಬಾಲೆ, ದೊಡ್ಡಮ್ಮನ ಸಹಾಯದಿಂದ ಮಗುವಿನ ಆರೈಕೆ ಮಾಡುತ್ತಿದ್ದಾಳೆ.
ಇದನ್ನೂ ಓದಿ:"ಡೆಲ್ಟಾ ವಿರುದ್ಧದ ಹೋರಾಟಕ್ಕೆ Sputnik V ಹೆಚ್ಚು ಪರಿಣಾಮಕಾರಿ"